ಹಿಂದೂರಕ್ಷದಳದ ಗೂಂಡಾಗಿರಿ: ಆಮ್ ಆದ್ಮಿ ಕಚೇರಿ ಮೇಲೆ ದಾಳಿ

ಬುಧವಾರ, 8 ಜನವರಿ 2014 (12:32 IST)
PR
PR
30ರಿಂದ 40 ಜನರಿದ್ದ ಹಿಂದು ರಕ್ಷದಳದ ಗುಂಪೊಂದು ಆಮ್ ಆದ್ಮಿ ಕೌಶಂಬಿ ಕಚೇರಿ ಮೇಲೆ ದಾಳಿ ನಡೆಸಿ ಕಲ್ಲು ತೂರಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ಸಂಭವಿಸಿದೆ. ಕಚೇರಿಯ ಕೋಣೆಯಲ್ಲಿ ಬೀಗ ಹಾಕಿಕೊಂಡ ಎಎಪಿ ಕಾರ್ಯಕರ್ತರು ದಾಳಿಯಿಂದ ಬಚಾವಾದರು. ಆದಾಗ್ಯೂ ದಾಳಿಕೋರರು ಬಾಗಿಲು ಒಡೆಯಲು ಕೂಡ ಪ್ರಯತ್ನಿಸಿ ನಂತರ ನೆಲಮಹಡಿಯಲ್ಲಿ ದಾಂಧಲೆ ಮಾಡಿ ತೆರಳಿದರು. ದಾಳಿಕೋರರು ಲಾಠಿಗಳನ್ನು ಹಿಡಿದಿದ್ದರು ಮತ್ತು ಕಲ್ಲುಗಳನ್ನು ತೂರುತ್ತಿದ್ದರು ಎಂದು ಕಚೇರಿಯೊಳಗಿದ್ದ ಎಎಪಿ ನಾಯಕ ದಿಲೀಪ್ ಪಾಂಡೆ ತಿಳಿಸಿದ್ದಾರೆ. ಕಾಶ್ಮೀರದಲ್ಲಿ ಸೇನೆ ನಿಯೋಜನೆ ಬಗ್ಗೆ ಜನಮತ ಸಂಗ್ರಹಿಸಬೇಕು ಎಂದು ಪ್ರಶಾಂತ್ ಭೂಷಣ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಆದರೆ ಕೇಜ್ರಿವಾಲ್ ಈ ಹೇಳಿಕೆ ಬಗ್ಗೆ ಇದು ಪಕ್ಷದ ಅಭಿಪ್ರಾಯವಲ್ಲ ಎಂದು ತಿಳಿಸಿದ್ದರು. ಪ್ರಶಾಂತ್ ಭೂಷಣ್ ಕೂಡ ಈ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಪ್ರಶಾಂತ್ ಭೂಷಣ್ ಹೇಳಿಕೆಯನ್ನು ಖಂಡಿಸಿ ಹಿಂದು ರಕ್ಷದಳದ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ. ಬೆಳಿಗ್ಗೆ 11 ಗಂಟೆ ಸುಮಾರಿಗೆ 30 ರಿಂದ 40 ಜನರ ಗುಂಪು ಈ ಕೃತ್ಯವೆಸಗಿದೆ. ಕೆಂಪು ಬಾವುಟ ಹಿಡಿದುಕೊಂಡು ಬಂದಿದ್ದ ಅವರು ದಾಳಿ ನಡೆಸಿದರು. ಈ ದಾಳಿಯನ್ನು ಎಎಪಿ ತೀವ್ರವಾಗಿ ಖಂಡಿಸಿದೆ.

ವೆಬ್ದುನಿಯಾವನ್ನು ಓದಿ