ಹಿತ್ರೋ ವಿಮಾನ ನಿಲ್ದಾಣದ ಬಂದನದ ಹಿಂದೆ ಸೋನಿಯಾ ಕೈವಾಡ: ಬಾಬಾ ರಾಮದೇವ್

ಶನಿವಾರ, 21 ಸೆಪ್ಟಂಬರ್ 2013 (13:25 IST)
PTI
ಲಂಡನ್‌ನ ಹಿತ್ರೋ ವಿಮಾನನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಯೋಗ ಗುರು ಬಾಬಾರಾಮದೇವ್ ಅವರನ್ನು ಬಂಧಿಸಿ 6 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ನನ್ನ ಬಂಧನದ ಹಿಂದೆ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಕೈವಾಡವಿದೆ ಎಂದು ಬಾಬಾ ರಾಮದೇವ್ ಆರೋಪಿಸಿದ್ದಾರೆ.

ಶುಕ್ರವಾರದಂದು ಮಧ್ಯಾಹ್ನ 1 ಗಂಟೆಗೆ ಹಿತ್ರೋ ವಿಮಾನನಿಲ್ದಾಣವನ್ನು ಪ್ರವೇಶಿಸುತ್ತಿದ್ದಂತೆ ಅವರನ್ನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿ ಲಗೇಜ್‌ ತಪಾಸಣೆ ನಡೆಸಿದ್ದಲ್ಲದೇ ಸುಮಾರು 6 ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು. ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಬಾಬಾ ರಾಮದೇವ್ ಅವರೊಂದಿಗಿದ್ದ ಸಂಸ್ಕೃತ ಪುಸ್ತಕಗಳ ಬಗ್ಗೆ ಬ್ರಿಟನ್ ಅಧಿಕಾರಿಗಳು ಸಂಶಯ ವ್ಯಕ್ತಪಡಿಸಿ ಭಾಷಾಂತರಕಾರರನ್ನು ಕರೆಸಿ ಪುಸ್ತಕಗಳನ್ನು ಓದುವಂತೆ ಆದೇಶಿಸಿದರು. ನಂತರ ರಾಮದೇವ್ ತಮ್ಮ ಜೊತೆಗೆ ತಂದಿದ್ ಆಯುರ್ವೇದಿಕ ಔಷಧಿಗಳ ಬಗ್ಗೆಯೂ ವಿಚಾರಣೆ ನಡೆಸಿದರು ಎನ್ನಲಾಗಿದೆ.

ವರದಿಗಳ ಪ್ರಕಾರ, ಪತಂಜಲಿ ಯೋಗಪೀಠ ಆಯೋಜಿಸಿದ್ದ ಬಾಬಾ ರಾಮದೇವ್ ಸ್ವಾಮಿ ವಿವೇಕಾನಂದರ 150ನೇ ವಾರ್ಷಿಕೋತ್ಸವ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಲಂಡನ್‌ನ ಲೈಚೆಸ್ಟರ್‌ಗೆ ತೆರಳಿದ್ದರು. ಲಂಡನ್‌ನಲ್ಲಿ ವಿಚಾರಣೆ ಮುಕ್ತಗೊಂಡ ನಂತರ ಅಮೆರಿಕೆಗೆ ತೆರಳಿದರು ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ