ಹೆಲಿಕಾಪ್ಟರ್ ಅಪಘಾತ: ರಾಷ್ಟ್ರಪತಿ ಅಪಾಯದಿಂದ ಪಾರು

ಗುರುವಾರ, 10 ಡಿಸೆಂಬರ್ 2009 (09:18 IST)
ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದಕ್ಕೆ ಅಪಘಾತಕ್ಕೀಡಾದ ಘಟನೆ ಬುಧವಾರ ನಡೆದಿದ್ದು, ಪ್ರತಿಭಾ ಪಾಟೀಲ್ ಪವಾಡಸದೃಶ ಅಪಾಯದಿಂದ ಪಾರಾಗಿದ್ದಾರೆ.

ಪುರಿಯಲ್ಲಿ ಸಮಾರಂಭ ಮುಗಿಸಿಕೊಂಡು ಪ್ರತಿಭಾ ಪಾಟೀಲ್ ಅವರು ಭುವನೇಶ್ವರಕ್ಕೆ ವಾಪಸಾಗುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಅವರ ಪತಿ ದೇವಿಸಿಂಗ್ ಶೇಖಾವತ್ ಮತ್ತು ಒರಿಸ್ಸಾ ರಾಜ್ಯಪಾಲ ಎಂ.ಸಿ.ಭಂಡಾರಿ ಕೂಡ ಜತೆಗಿದ್ದರು. ರಾಷ್ಟ್ರಪತಿ ತೆರಳುತ್ತಿದ್ದ ಹೆಲಿಕಾಪ್ಟರ್‌ನ ಮೂರು ಬ್ಲೇಡ್‌ಗಳು ಕಟ್ಟಡಕ್ಕೆ ತಾಗಿದ್ದವು, ಕೂಡಲೇ ಹತೋಟಿ ತಪ್ಪಿದ ಹೆಲಿಕಾಪ್ಟರ್ ಅನ್ನು ಪೈಲಟ್ ಮುನ್ನೆಚ್ಚರಿಕೆಯಿಂದಾಗಿ ನಿಯಂತ್ರಣಕ್ಕೆ ತೆಗೆದುಕೊಂಡು ಸುರಕ್ಷಿತವಾಗಿ ಕೆಳಗಿಳಿಸಿದರು.

ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಅಧಿಕಾರಿಗಳು ಸುರಕ್ಷಿತವಾಗಿದ್ದಾರೆಂದು ಮೂಲಗಳು ತಿಳಿಸಿವೆ. ಘಟನೆಗೆ ಚಾಲಕನ ತಪ್ಪೋ ಅಥವಾ ತಾಂತ್ರಿಕ ಅಡಚಣೆ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅನ್ನು ತಾಂತ್ರಿಕ ತೊಂದರೆಯಿಂದಾಗಿ ಕತ್ತಲಿನ ಪ್ರದೇಶದಲ್ಲಿ ಬಲವಂತವಾಗಿ ಇಳಿಸಲಾಗಿತ್ತು. ಈ ಪ್ರಕರಣ ಕೂಡ ವಿಚಾರಣೆ ಹಂತದಲ್ಲಿದ್ದು, ಪೈಲಟ್‌ಗೆ ಬಲವಂತದ ರಜೆಯ ಮೇಲೆ ಕಳುಹಿಸಲಾಗಿದೆ.

ವೆಬ್ದುನಿಯಾವನ್ನು ಓದಿ