ಅರವಿಂದ್ ಕೇಜ್ರಿವಾಲ್ ಜನಪ್ರಿಯತೆ ಬಿಜೆಪಿಗೆ ನುಂಗಲಾರದ ತುತ್ತಾಗಿದೆ: ಸಿಸೋಡಿಯಾ

ಸೋಮವಾರ, 25 ಮೇ 2015 (17:24 IST)
ಆಮ್ ಆದ್ಮಿ ಪಕ್ಷದ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೆದರಿದೆ. ಕಳೆದ ವರ್ಷ ನವದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನ ನೀಡಲಾಗುವುದು ಎಂದು ಘೋಷಿಸಿದ್ದ ಮೋದಿ ಸರಕಾರ ಇದೀಗ ಯೂ-ಟರ್ನ್ ಹೊಡಿದಿದೆ ಎಂದು ಸಚಿವ ಮನೀಶ್ ಸಿಸೋಡಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ದೆಹಲಿ ಸರಕಾರ ಮತ್ತು ಲೆಫ್ಟಿನೆಂಟ್ ಗೌವರ್ನರ್ ಮಧ್ಯೆ ತೀವ್ರ ಬಿಕ್ಕಟ್ಟು ಎದುರಾದ ಹಿನ್ನೆಲೆಯಲ್ಲಿ ಸಿಸೋಡಿಯಾ  ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 
ಕೇಂದ್ರದ ಗೃಹ ಸಚಿವಾಲಯ ಮುಖ್ಯಮಂತ್ರಿ ಕೇಜ್ರಿವಾಲ್‌ಗಿಂತ ಲೆಫ್ಟಿನೆಂಟ್ ಗೌವರ್ನರ್‌ಗೆ ಹೆಚ್ಚಿನ ಅಧಿಕಾರವಿದೆ ಎಂದು ನೋಟಿಸ್ ಜಾರಿಗೊಳಿಸಿರುವುದು ಆಪ್ ನಾಯಕರಿಗೆ ಅಸಮಾಧಾನ ಮೂಡಿಸಿದೆ.
 
ಹಂಗಾಮಿ ಕಾರ್ಯದರ್ಶಿಯಾಗಿ ಐಎಎಸ್ ಅಧಿಕಾರಿ ಶಂಕುತಲಾ ಗಾಮ್ಲಿನ್ ಅವರನ್ನು ನೇಮಕ ಮಾಡಿದ್ದ ಲೆಫ್ಟಿನೆಂಟ್ ಗೌವರ್ನರ್ ನಿಲುವನ್ನು ಆಪ್ ವಿರೋಧಿಸಿತ್ತು. ನಜೀಬ್ ಜಂಗ್ ದೆಹಲಿ ಅಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರೋಧಿಸಿದ್ದರು. 
 
ದೆಹಲಿ ಸರಕಾರ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಇಮೇಜ್‌ಗೆ ಧಕ್ಕೆ ತರಲು ಮಾಧ್ಯಮಗಳು ಪ್ರಯತ್ನಿಸುತ್ತಿವೆ. ನಾವು ಮಾಧ್ಯಮದ ವಿರೋಧಿಗಳಲ್ಲ . ಸುಳ್ಳಿನ ವಿರೋಧಿಗಳು. ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ಹರಡುತ್ತಿವೆ ಎಂದು ಸಚಿವ ಮನೀಷ್ ಸಿಸೋಡಿಯಾ ಕಿಡಿಕಾರಿದವು.  
 

ವೆಬ್ದುನಿಯಾವನ್ನು ಓದಿ