ಹಿಮಪಾತಕ್ಕೆ ಸಿಲುಕಿ 10 ಮಂದಿ ಸೇನಾ ಯೋಧರ ಜೀವಂತ ಸಮಾಧಿ

ಬುಧವಾರ, 3 ಫೆಬ್ರವರಿ 2016 (18:15 IST)
ಪೂರ್ವ ಲಡಾಖ್‌ನ ಸಿಯಾಚಿನ್ ಗ್ಲೇಶಿಯರ್‌ನ 19,600 ಅಡಿ ಎತ್ತರದಲ್ಲಿ ಹಿಮಪಾತ ಉಂಟಾಗಿ 10 ಮಂದಿ ಸೈನಿಕರು ಹಿಮದಲ್ಲಿ ಹೂತು ಹೋಗಿರುವ ದಾರುಣ ಘಟನೆ ವರದಿಯಾಗಿದೆ.
ಉತ್ತರ ಕಮಾಂಡ್‌‍ನ ರಕ್ಷಣಾ ಇಲಾಖೆಯ ವಕ್ತಾರ ಕರ್ನಲ್ ಎಸ್‌.ಡಿ.ಗೋಸ್ವಾಮಿ ಮಾತನಾಡಿ, ಹಿಮದಲ್ಲಿ ಹುದುಗಿರುವ ಸೈನಿಕರನ್ನು ರಕ್ಷಿಸಲು ಸೇನೆ ಮತ್ತು ವಾಯುಸೇನೆಯ ವಿಶೇಷ ತಜ್ಞರ ಪಡೆ ಪರಿಹಾರ ಕಾರ್ಯಾಚರಣೆ ಆರಂಭಿಸಿದೆ ಎಂದು ತಿಳಿಸಿದ್ದಾರೆ.
 
ಪೂರ್ವ ಲಡಾಖ್‌ನ ಸಿಯಾಚಿನ್ ಗ್ಲೇಶಿಯರ್‌ನಲ್ಲಿ ಘಟನೆ ನಡೆದಾಗ ಜ್ಯೂನಿಯರ್ ಕಮಾಂಡಿಂಗ್ ಆಫೀಸರ್ ಸೇರಿದಂತೆ ಒಟ್ಟು 10 ಮಂದಿ ಸೈನಿಕರಿದ್ದರು ಎಂದು ಗೋಸ್ವಾಮಿ ಮಾಹಿತಿ ನೀಡಿದ್ದಾರೆ.
 
ಹಿಮಾಲಯದ ಪೂರ್ವಿಯ ಕಾರಾಕೋರಮ್ ಪ್ರದೇಶದಲ್ಲಿರುವ ಸಿಯಾಚಿನ್ ಗ್ಲೇಶಿಯರ್ ಲೈನ್ ಆಫ್ ಕಂಟ್ರೋಲ್ ಬಳಿ ಈ ಘಟನೆ ನಡೆದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
 
ಕಳೆದ 1984ರಿಂದ 2015ರವರೆಗೆ ಸಿಯಾಚಿನ್ ಪ್ರದೇಶದಲ್ಲಿ ವಿಷಮಿತ ಹವಾಮಾನದಿಂದ ಕನಿಷ್ಠ 869 ಸೈನಿಕರು ತಮ್ಮ ಜೀವವನ್ನು ಕಳೆದುಕೊಂಡು ಹುತಾತ್ಮರಾಗಿದ್ದಾರೆ ಎಂದು ಬಾರತೀಯ ಸೇನಾ ವಕ್ತಾರ ಕರ್ನಲ್ ಗೋಸ್ವಾಮಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ