ಮಹಾಶಿವರಾತ್ರಿಯಂದು ಎಲ್‌ಇಟಿ ಉಗ್ರರ ದಾಳಿ: ಪಾಕ್‌‌ನಿಂದ ಮಾಹಿತಿ

ಭಾನುವಾರ, 6 ಮಾರ್ಚ್ 2016 (13:08 IST)
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತವರು ಗುಜರಾತ್‌‌ನಲ್ಲಿ ಶಿವರಾತ್ರಿ ಸಂಭ್ರಮವನ್ನು ಗುರಿಯಾಗಿಸಿಕೊಂಡು ಎಲ್‌ಇಟಿ ಉಗ್ರರು ದೊಡ್ಡ ಪ್ರಮಾಣದ ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂದು ಪಾಕಿಸ್ತಾನದ ಎನ್‌‌ಎಸ್‌ಎ ಮತ್ತು ಭಾರತೀಯ ಗುಪ್ತಚರ ಇಲಾಖೆ ನೀಡಿದ ಮಾಹಿತಿ ಹಿನ್ನೆಲೆಯಲ್ಲಿ  ಗುಜರಾತ್ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
 
ಗುಜರಾತ್‌ನ ಇತಿಹಾಸ ಸುಪ್ರಸಿದ್ಧ ಸೋಮನಾಥ ದೇವಾಲಯವನ್ನು ಗುರಿಯಾಗಿಸಿಕೊಂಡು ಹಲವೆಡೆ ವಿಧ್ವಂಸಕ ಕೃತ್ಯವೆಸಗಲು ಉಗ್ರರು ಸಂಚು ರೂಪಿಸಿದ್ದಾರೆಂದು ಪಾಕಿಸ್ತಾನದ ಎನ್‌‌ಎಸ್‌ಎ ಭಾರತಕ್ಕೆ  ಮಾಹಿತಿ ನೀಡಿದೆ ಮತ್ತು ಪಾಕಿಸ್ತಾನದಿಂದ 2 ಎನ್‌‌ಎಸ್‌ಎ ತಂಡ ಭಾರತಕ್ಕೆ ಬಂದಿದೆ.
 
ಈಗಾಗಲೇ 10 ಉಗ್ರರು ಭಾರತದ ಗಡಿಯೊಳಗೆ ನುಸುಳಿದ್ದಾರೆ ಎಂದು ಮಾಹಿತಿ ಲಭಿಸಿದ್ದು ಉಗ್ರರ ಅಡಗು ತಾಣ ಪತ್ತೆಮಾಡಲು ಸೈನ್ಯ ಕೊಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದೆ.
 
ಉಗ್ರರಿಗೆ ತಕ್ಕ ಪಾಠ ಕಲಿಸಲು ಸೇನೆ ಸರ್ವ ಸನ್ನದ್ಧವಾಗಿದೆ. ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಮರ್ಥರಾಗಿದ್ದೇವೆ ಎಂದು ಗುಜರಾತಿನ ಡಿಐಜಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದಾರೆ.
 
ಉಗ್ರರ ಇಂತಹ ಚಿಲ್ಲರೆ ಕೃತ್ಯಗಳಿಂದ ಭಾರತದಂತಹ ಮಹಾನ್ ರಾಷ್ಟ್ರಕ್ಕೆ ಯಾವುದೇ ರೀತಿಯ ಧಕ್ಕೆಯಾಗದು. ಭಾರತೀಯ ಸೇನೆ ಉಗ್ರರನ್ನು ಸದೆಬಡೆಯಲು ಪ್ರತಿತಂತ್ರ ರೂಪಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. 
 
ನಿನ್ನೆಯಷ್ಟೆ ಬಿಎಸ್‌ಎಫ್ ಯೋಧರು ಕಚ್ ಕರಾವಳಿಯ ಕೋಟೇಶ್ವರ ಕೊಲ್ಲಿಯಲ್ಲಿ ಪಾಕಿಸ್ತಾನಕ್ಕೆ ಸೇರಿದ್ದ ದೋಣಿಯನ್ನು ವಶಕ್ಕೆ ಪಡೆದಿದ್ದಾರೆ.   
 

ವೆಬ್ದುನಿಯಾವನ್ನು ಓದಿ