ಮೋದಿ ಸರಕಾರಕ್ಕೆ 100 ದಿನ: ಒಳ್ಳೆಯ ದಿನಗಳು ಎಲ್ಲಿವೆ ಎಂದ ಕಾಂಗ್ರೆಸ್

ಮಂಗಳವಾರ, 2 ಸೆಪ್ಟಂಬರ್ 2014 (14:21 IST)
ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ದೇಶದ ಜನತೆಗೆ ಒಳ್ಳೆಯ ದಿನಗಳು ಬರಲಿವೆ ಎನ್ನುವ ಭರವಸೆ ನೀಡಿದ್ದ ಬಿಜೆಪಿ ಇದೀಗ ಭರವಸೆಯನ್ನು ಹುಸಿಗೊಳಿಸಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. 
 
ಎಐಸಿಸಿ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ, ಮೋದಿ ಸರಕಾರ ನೀಡಿದ ಆಶ್ವಾಸನೆಗಳು ಎಲ್ಲಿವೆ? 100 ದಿನಗಳಲ್ಲಿ ಮೋದಿ ಸರಕಾರ ಸಾಧಿಸಿದ್ದೇನು ಎಂದು ಪ್ರಶ್ನಿಸಿದ್ದಾರೆ.
 
ಕೇಂದ್ರದಲ್ಲಿರುವ ಎನ್‌ಡಿಎ ಸರಕಾರದ ಆರ್ಥಿಕ ಕುಸಿತ, ದರ ಏರಿಕೆ, ವಿದೇಶಾಂಗ ನೀತಿಗಳಿಂದ ದೇಶದ ಜನತೆ ತತ್ತರಿಸಿದ್ದಾರೆ. ಅಚ್ಚೇ ದಿನ್ ಆಯೇಗಾ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಜನತೆಯನ್ನು ವಂಚಿಸಿದೆ ಎಂದು ಆರೋಪಿಸಿದ್ದಾರೆ.
 
ಒಳ್ಳೆಯ ದಿನಗಳ ಬಗ್ಗೆ ಬಿಜೆಪಿ ನಾಯಕರು ಕೇವಲ ಮಾತನಾಡುತ್ತಾರೆ. ಯಾವುದೇ ಒಳ್ಳೆಯ ಭರವಸೆಗಳಾಗಲಿ ಅಥವಾ ಕಾರ್ಯಗಳಾಗಲಿ ನಡೆಯುತ್ತಿಲ್ಲ. ಒಳ್ಳೆಯ ದಿನಗಳು ಕೇವಲ ಬಿಜೆಪಿಗಾಗಿ ಬಂದಿವೆ ಎಂದು ಲೇವಡಿ ಮಾಡಿದ್ದಾರೆ.
 
ಕೇಂದ್ರದಲ್ಲಿರುವ ಮೋದಿ ಸರಕಾರ ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ದವಿಲ್ಲ. ಕೇವಲ ಯುಪಿಎ ಸರಕಾರದ ವೈಫಲ್ಯಗಳನ್ನು ಆರೋಪಿಸುವಲ್ಲಿಯೇ ದಿನಗಳನ್ನು ಕಳೆಯುತ್ತಿದೆ ಎಂದು ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಪಕ್ಷದ ವಕ್ತಾರ ಆನಂದ್ ಶರ್ಮಾ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ