ಪ್ಯಾಸೆಂಜರ್ ರೈಲುಗಳ ಡಿಕ್ಕಿ: 12 ಸಾವು, 45 ಜನರಿಗೆ ಗಾಯ

ಬುಧವಾರ, 1 ಅಕ್ಟೋಬರ್ 2014 (10:44 IST)
ಎರಡು ಪ್ಯಾಸೆಂಜರ್ ರೈಲುಗಳು ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 12 ಜನರು ಸತ್ತು , 45 ಜನರು ಗಾಯಗೊಂಡ ಘಟನೆ  ಉತ್ತರಪ್ರದೇಶದ ಗೋರಕ್ಪುರದ ಸಮೀಪ ನಡೆದಿದೆ. ಸಾವಿನ ಸಂಖ್ಯೆ ಹೆಚ್ಚಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾರಣಾಸಿಯಿಂದ ಗೋರಕ್ಪುರಕ್ಕೆ ಪ್ರಯಾಣಿಸುತ್ತಿದ್ದ  ಕೃಷಿಕ್ ಎಕ್ಸ್‌ಪ್ರೆಸ್, ಲಖನೌದಿಂದ ಬರೌನಿಗೆ ಹೋಗುತ್ತಿದ್ದ ಬರೌನಿ ಎಕ್ಸ್‌ಪ್ರೆಸ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ರಾತ್ರಿ ಸುಮಾರು 11 ಗಂಟೆಗೆ ಗೋರಕ್ಪುರದಿಂದ ಸುಮಾರು ಏಳು ಕಿಮೀ ದೂರದಲ್ಲಿ ಈ ಘಟನೆ ನಡೆದಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಲೋಕ್ ಸಿಂಗ್ ಹೇಳಿದ್ದಾರೆ.
 
ಘರ್ಷಣೆಯಿಂದಾಗಿ ಬರೌನಿ ಎಕ್ಸ್‌ಪ್ರೆಸ್‌ ಬೋಗಿಗಳು  ಹಳಿಯಿಂದ ಕೆಳಗುರುಳಿದವು ಎಂದು ಸಿಂಗ್ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ರೈಲ್ವೆ ಅಧಿಕಾರಿಗಳು ಗಾಯಗೊಂಡರವರನ್ನು  ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು.
 
ಘಟನೆಯ ನಂತರ ಗೋರಕ್ಪುರ-ವಾರಣಾಸಿ ಮಾರ್ಗದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಮತ್ತು ಕೆಲವು ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ. 
 
ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ರೈಲು ಅಧಿಕಾರಿಗಳು ತಿಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಜಾರಿಯಲ್ಲಿದೆ. 

ವೆಬ್ದುನಿಯಾವನ್ನು ಓದಿ