ಭಗವದ್ಗೀತೆ ಸ್ಪರ್ಧೆ ಗೆದ್ದ ಮುಸ್ಲಿಮ್ ಹುಡುಗಿ

ಶುಕ್ರವಾರ, 3 ಏಪ್ರಿಲ್ 2015 (15:26 IST)
6 ನೇ ತರಗತಿಯಲ್ಲಿ ಓದುತ್ತಿರುವ 12 ವರ್ಷದ ಬಾಲಕಿ ಮರಿಯಂ ಸಿದ್ಧಿಕಿ 3,000 ಸ್ಪರ್ಧಾರ್ಥಿಗಳನ್ನು ಮಣಿಸಿ ಗೀತಾ ಚಾಂಪಿಯನ್ ಲೀಗ್‌ನ ವಿಜಯಿಯಾಗಿ ಹೊರಹೊಮ್ಮಿದ್ದಾಳೆ. ಅಂತರಾಷ್ಟ್ರೀಯ ಸಂಘಟನೆಯಾದ ಕೃಷ್ಣ ಪ್ರಜ್ಞಾ( ಇಸ್ಕಾನ್) ಆಯೋಜಿಸಿದ್ದ ಹಿಂದೂಗಳ ಪವಿತ್ರ ಗೃಂಥವಾದ ಭಗವದ್ಗೀತೆ ಸಂಬಂಧಿಸಿದ ಈ ಲಿಖಿತ ಪರೀಕ್ಷೆಯಲ್ಲಿ ಮುಸ್ಲಿಮ್ ವಿದ್ಯಾರ್ಥಿನಿ ಗೆದ್ದಿರುವುದು ಬಹು ವಿಶೇಷವೆನಿಸಿದೆ. 

ಕಾಸ್ಮೊಪೊಲಿಟನ್ ಹೈಸ್ಕೂಲ್ ವಿದ್ಯಾರ್ಥಿನಿಯಾಗಿರುವ ಮರಿಯಮ್ ಧರ್ಮಗಳ ಬಗ್ಗೆ ಜಿಜ್ಞಾಸೆಯನ್ನು ಹೊಂದಿದ್ದು, ಬಿಡುವಿನ ಸಮಯದಲ್ಲಿ ಧಾರ್ಮಿಕ ಗೃಂಥಗಳನ್ನು ಓದುವ ಹವ್ಯಾಸವನ್ನಿಟ್ಟುಕೊಂಡಿದ್ದಾಳೆ. ನನ್ನ ಶಿಕ್ಷಕಿ ಈ ಸ್ಪರ್ಧಯ ಬಗ್ಗೆ ತಿಳಿಸಿದಾಗ  ಆ ಗೃಂಥದಲ್ಲಿರುವುದು ಏನೆಂದು ತಿಳಿದುಕೊಳ್ಳಲು ಇದು ಸದವಕಾಶ ಎಂದು ನಾನು ನಿಶ್ಚಯಿಸಿದೆ. ನನ್ನ ಪಾಲಕರು ಸಹ ನನಗೆ ಬೆಂಬಲ ನೀಡಿದರು ಎನ್ನುತ್ತಾಳೆ ಬಾಲಕಿ. 
 
ತನ್ನ ತಂದೆತಾಯಿಗಳ ಜತೆ ಸದಾ ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿದ ಚರ್ಚೆ ನಡೆಸುವ ಆಕೆ, ಇಸ್ಕಾನ್ ನೀಡಿದ ಪುಸ್ತಕಗಳನ್ನು ಓದಿಕೊಂಡು 100 ಅಂಕಗಳ ಬಹು ಆಯ್ಕೆಯ ಪ್ರಶ್ನೆ ಆಧರಿತ ಪರೀಕ್ಷೆಗೆ ಒಂದು ತಿಂಗಳಿಂದ ತಯಾರಿ ನಡೆಸಿದ್ದಳು. .
 
ಪ್ರತಿಯೊಬ್ಬರೂ ಎಲ್ಲ ಧರ್ಮಗಳನ್ನು ಗೌರವಿಸಬೇಕು ಮತ್ತು ಒಪ್ಪಿಕೊಳ್ಳಬೇಕು ಎಂದು ನನ್ನ ಕುಟುಂಬ ನಂಬಿದೆ. ಯಾವ ಧರ್ಮವು ಕೂಡ ದ್ವೇಷ ಮತ್ತು ತಪ್ಪು ಸಂದೇಶಗಳನ್ನು ಹೇಳುವುದಿಲ್ಲ ಎಂದು ಮರಿಯಂ ತಂದೆ ಆಸಿಫ್ ಸಿದ್ಧಿಕಿ ಹೇಳುತ್ತಾರೆ. 

ವೆಬ್ದುನಿಯಾವನ್ನು ಓದಿ