ಜಮ್ಮುವಿನಲ್ಲಿ ಭೀಕರ ರಸ್ತೆ ದುರಂತ: 17 ಸಾವು, 27 ಮಂದಿಗೆ ಗಾಯ

ಮಂಗಳವಾರ, 20 ಮೇ 2014 (15:58 IST)
ಕಾಶ್ಮೀರ ಕಣಿವೆಯಲ್ಲಿ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ಸೊಂದು ಆಳವಾದ  ಕಣಿವೆಗೆ ಬಿದ್ದು ಹದಿನೇಳು ಜನರು ದುರ್ಮರಣಕ್ಕೀಡಾಗಿ  27 ಗಾಯಗೊಂಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
 
ಜಮ್ಮುವಿನಿಂದ 170 ಕಿಮೀ ದೂರದಲ್ಲಿ, ರಾಮಬಾನ್ ಜಿಲ್ಲೆಯ ಜಮ್ಮು- ಶ್ರೀನಗರ ಹೆದ್ದಾರಿಯ ದಿಗ್ದೋಲ್‌ನಲ್ಲಿ ಘಟನೆ ನಡೆದಿದ್ದು,  ಚಾಲಕ ಬಸ್ ಮೇಲೆ ತನ್ನ ನಿಯಂತ್ರಣವನ್ನು ಕಳೆದುಕೊಂಡಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.
 
ಅಪಘಾತದಲ್ಲಿ 17 ಜನರು ಸಾವಿಗೀಡಾಗಿದ್ದು, 27 ಜನ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದವರನ್ನು ಹೆಲಿಕಾಫ್ಟರ್ ಮೂಲಕ ಜಮ್ಮುವಿನಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
 
ಪ್ರಯಾಣಿಕರಲ್ಲಿ ಹೆಚ್ಚಿನವರು ಯುವಕರಾಗಿದ್ದು, ಪೂಂಛ್‌ ಮತ್ತು ರಾಜೋರಿ ಜಿಲ್ಲೆಯಿಂದ ಕಾಶ್ಮೀರ ಕಣಿವೆ ಕಡೆಗೆ ಉದ್ಯೋಗ ನೇಮಕಾತಿ ಮೇಳದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಕೆಲವು ಪ್ರಯಾಣಿಕರು ಗುಜರಾತಿನವರಾಗಿದ್ದಾರೆ.   
 
ನಾಗರಿಕ ಆಡಳಿತದ ಸಹಾಯದಿಂದ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಸ್ಥಳದಲ್ಲಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ