2ಜಿ: ಕೊನೆಗೂ ಸಿಕ್ತು ಕನಿಮೋಳಿಗೆ ಜಾಮೀನು

ಸೋಮವಾರ, 28 ನವೆಂಬರ್ 2011 (16:19 IST)
PTI
2ಜಿ ತರಂಗ ಗುಚ್ಚ ಹಗರಣದಲ್ಲಿ ಆರೋಪಿಯಾದ ಡಿಎಂಕೆ ಸಂಸದೆ ಕನಿಮೋಳಿ ಮತ್ತು ಇತರ ನಾಲ್ಕು ಆರೋಪಿಗಳಿಗೆ ದೆಹಲಿ ಹೈಕೋರ್ಟ್ ಷರತ್ತಿನ ಜಾಮೀನು ನೀಡಿ ಆದೇಶ ಹೊರಡಿಸಿದೆ.

ಆರೋಪಿಗಳು ತಲಾ ಒಂದು ಲಕ್ಷ ರೂಪಾಯಿಗಳ ಎರಡು ಬಾಂಡ್‌ ನೀಡಬೇಕು ಮತ್ತು ದೇಶ ಬಿಟ್ಟು ಹೊಗಬಾರದು ಎನ್ನುವ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

2ಜಿ ತರಂಗ ಗುಚ್ಚ ಹಗರಣದಲ್ಲಿ ಆರೋಪಿಗಳಾಗಿದ್ದ ಐವರು ಕಾರ್ಪೋರೇಟ್ ಉದ್ಯಮಿಗಳಿಗೆ ಕಳೆದ ನವೆಂಬರ್ 23 ರಂದು ಸುಪ್ರೀಂಕೋರ್ಟ್ ಜಾಮೀನು ನೀಡಿ ಆದೇಶ ಹೊರಡಿಸಿತ್ತು. ಕನಿಮೋಳಿ ಹಾಗೂ ಇತರ ನಾಲ್ಕು ಮಂದಿ ಆರೋಪಿಗಳು ಕೂಡಾ ಜಾಮೀನಿಗಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ದೆಹಲಿ ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆಯಲ್ಲಿ ಕನಿಮೋಳಿ ಮತ್ತು ಸಿನಿಯುಗ್ ಸಂಸ್ಥೆಯ ಮುಖ್ಯಸ್ಥ ಕರೀಮ್ ಮೊರಾನಿಯವರ ಜಾಮೀನು ಅರ್ಜಿಗೆ ಸಿಬಿಐ ವಿರೋಧಿಸದಿರುವುದರಿಂದ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.

ಕಲೈಜ್ಞರ್ ಟಿವಿ ಚಾನೆಲ್ ವ್ಯವಸ್ಥಾಪಕ ನಿರ್ದೇಶಕ ಶರತ್ ಕುಮಾರ್, ಕುಸೆಗಾಂವ್ ಕಂಪೆನಿಯ ನಿರ್ದೇಶಕರಾದ ಆಸೀಫ್ ಬಲ್ವಾ ಮತ್ತು ರಾಜೀವ್ ಅಗರ್‌ವಾಲ್ ಅವರಿಗೆ ಕೂಡಾ ಹೈಕೋರ್ಟ್ ಜಾಮೀನು ನೀಡಿದೆ.

ವೆಬ್ದುನಿಯಾವನ್ನು ಓದಿ