2ಜಿ ರೂವಾರಿ ಪಿ.ಚಿದಂಬರಂ ತಿಹಾರ್ ಜೈಲಿನ ಅತಿಥಿ: ಬಿಜೆಪಿ

ಶುಕ್ರವಾರ, 30 ಸೆಪ್ಟಂಬರ್ 2011 (15:42 IST)
PTI
2ಜಿ ಹಗರಣದಲ್ಲಿ ಕೇಂದ್ರ ಗೃಹ ಸಚಿವರ ಪಾತ್ರವಿರುವುದರ ಬಗ್ಗೆ ಹೇರಳ ಸಾಕ್ಷ್ಯಾಧಾರಗಳು ಲಭ್ಯವಿದ್ದು, ಅವರನ್ನು ತಿಹಾರ್ ಜೈಲಿಗೆ ಕಳುಹಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಕಾರಿಣಿ ಸಭೆಯಲ್ಲಿ ಪಕ್ಷದ ವಕ್ತಾರ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ವಕ್ತಾರ ಪ್ರಸಾದ್, ಯುಪಿಎ ಸರಕಾರ ಚಿದಂಬರಂ ಅವರನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದರು.

2ಜಿ ಹಗರಣದಲ್ಲಿ ಚಿದಂಬರಂ ಅವ್ಯವಹಾರಗಳ ಬಗ್ಗೆ ಹಲವು ಸಾಕ್ಷ್ಯಾಧಾರಗಳು ಲಭ್ಯವಿವೆ. ಅವರನ್ನು ತಿಹಾರ್ ಜೈಲಿಗೆ ಕಳುಹಿಸುವುದನ್ನು ಬಿಟ್ಟು ಯುಪಿಎ ಸರಕಾರ ಅವರನ್ನು ರಕ್ಷಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಾಜಿ ಟೆಲಿಕಾಂ ಸಚಿವ ಎ.ರಾಜಾ ವಿರುದ್ಧ ಸಾಕ್ಷ್ಯಾಧಾರಗಳಿರುವುದರಿಂದ ಇದೀಗ ಜೈಲಿನಲ್ಲಿದ್ದಾರೆ. ಚಿದಂಬರಂ ಕೂಡಾ ರಾಜಾ ಎಸಗಿದಷ್ಟೆ ಗಂಭೀರ ಕರ್ತವ್ಯಲೋಪ ಎಸಗಿದ್ದಾರೆ. ಆದ್ದರಿಂದ ರಾಜಾ ಯಾಕೆ ಜೈಲಿನಲ್ಲಿದ್ದಾರೆ ಮತ್ತು ಚಿದಂಬರಂ ಯಾಕೆ ಹೊರಗಿದ್ದಾರೆ. ಅವರನ್ನು ಕೂಡಾ ತಿಹಾರ್ ಜೈಲಿಗೆ ಕಳುಹಿಸಬೇಕು ಎಂದು ಕಿಡಿಕಾರಿದರು.

ಕೇಂದ್ರದ ಗೃಹ ಸಚಿವರ ವಿರುದ್ಧ ತನಿಖೆ ನಡೆಸದಂತೆ ಕೇಂದ್ರ ಸರಕಾರ ಸಿಬಿಐಗೆ ಆದೇಶಿಸಿದೆ ಎಂದು ಬಿಜೆಪಿ ಮುಖಂಡ ಪ್ರಸಾದ್ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ