2014ರ ಲೋಕಸಭಾ ಚುನಾವಣೆಯೇ ನನ್ನ ಗುರಿ: ಮೋದಿ

ಮಂಗಳವಾರ, 2 ಏಪ್ರಿಲ್ 2013 (12:14 IST)
PTI
ಬಿಜೆಪಿಯ ಸಂಸದೀಯ ಮಂಡಳಿಗೆ ಸೇರ್ಪಡೆಯಾಗಿರುವ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿಗೆ ತನ್ನ ರಾಷ್ಟ್ರ ರಾಜಕಾರಣದ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ರಹದಾರಿ ಸಿಕ್ಕಿದಂತಾಗಿದೆ. ಅವರ ಮುಂದಿನ ಗುರಿ ಲೋಕಸಭಾ ಚುನಾವಣೆ ಎಂಬುದಾಗಿ ಅವರ ಆಪ್ತ ವಲಯದಲ್ಲಿರುವವರು ಹೇಳುತ್ತಿದ್ದಾರೆ.

ಪಕ್ಷದ ನಿರ್ಧಾರಗಳನ್ನು ಕೈಗೊಳ್ಳುವ ಪರಮೋಚ್ಚ ವ್ಯವಸ್ಥೆಯಾಗಿರುವ ಸಂಸದೀಯ ಮಂಡಳಿಗೆ ಮತ್ತು ಕೇಂದ್ರೀಯ ಚುನಾವಣಾ ಸಮಿತಿಗೆ ಅಧಿಕೃತವಾಗಿ ಸೇರ್ಪಡೆಯಾಗಿರುವುದರಿಂದ ಮೋದಿಯ ಪೂರ್ಣ ಗಮನ ಮುಂದಿನ ಸಾರ್ವತ್ರಿಕ ಚುನಾವಣೆ ಮೇಲಿದೆ ಎಂದು ರಾಜ್ಯದ ನಾಯಕರು ಹೇಳಿದ್ದಾರೆ.

ಗುಜರಾತಿನ ಹ್ಯಾಟ್ರಿಕ್‌ ಗೆಲುವು ಮತ್ತು ಪ್ರಮುಖ ಮಂಡಳಿಗೆ ಪಡೆದುಕೊಂಡಿರುವ ಪದೋನ್ನತಿಯಿಂದಾಗಿ ಅವರೀಗ ಬಹಿರಂಗವಾಗಿಯೇ ತನ್ನ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳನ್ನು ವ್ಯಕ್ತಪಡಿಸಬಹುದು ಎಂದಿದ್ದಾರೆ.

ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ನಿನ್ನೆ ಪ್ರಕಟಿಸಿರುವ ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಮೋದಿ ಆಯಕಟ್ಟಿನ ಸ್ಥಾನಗಳಿಗೆ ಆಯ್ಕೆಯಾಗಿರುವುದು ಮಾತ್ರವಲ್ಲದೆ ತನಗೆ ನಿಷ್ಠರಾಗಿರುವ ಅಮಿತ್‌ ಶಾ, ಸ್ಮತಿ ಇರಾನಿ ಮುಂತಾದವರಿಗೂ ಸ್ಥಾನಗಳನ್ನು ಕೊಡಿಸುವಲ್ಲಿ ಸಫ‌ಲರಾಗಿದ್ದಾರೆ. 2014ರ ಸಾರ್ವತ್ರಿಕ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜನಾಥ್‌ ಸಿಂಗ್‌ ತನ್ನ ತಂಡವನ್ನು ಸಮಗ್ರವಾಗಿ ಪುನಾರಚಿಸಿಕೊಂಡಿದ್ದಾರೆ.

ಜನಪ್ರಿಯತೆಯ ತುತ್ತ ತುದಿಯಲ್ಲಿರುವುದರಿಂದ ಮೋದಿಯನ್ನು ಸಂಸದೀಯ ಮಂಡಳಿಗೆ ಸೇರಿಸಿಕೊಳ್ಳಲಾಗಿದೆ ಎಂದು ಪಕ್ಷದ ವಕ್ತಾರ ಪ್ರಕಾಶ್‌ ಜಾವಡೇಕರ್‌ ನಿನ್ನೆಯೇ ಹೇಳಿದ್ದಾರೆ. ನರೇಂದ್ರ ಮೋದಿ ಬಿಜೆಪಿಯ ಹಿರಿಯ ಮುಖ್ಯಮಂತ್ರಿ ಮಾತ್ರವಲ್ಲ ತನ್ನ ರಾಜ್ಯದಲ್ಲಿ ಅವರು ಅಭೂತಪೂರ್ವ ಯಶಸ್ಸು ಕಂಡಿದ್ದಾರೆ. ಬಿಜೆಪಿಯಲ್ಲಿ ಅವರೀಗ ಅತ್ಯಂತ ಜನಪ್ರಿಯ ನಾಯಕ. ಭ್ರಷ್ಟಾಚಾರ ರಹಿತ ಉತ್ತಮ ಆಳ್ವಿಕೆಗೆ ಅವರು ಐಕಾನ್‌ ಎಂದು ಜಾವಡೇಕರ್‌ ಹೇಳಿದ್ದಾರೆ.

ದಿಲ್ಲಿಯಲ್ಲಿ ನಿನ್ನೆ ರಾಜನಾಥ್‌ ಸಿಂಗ್‌ ಹೊಸ ಪದಾಧಿಕಾರಿಗಳ ಪಟ್ಟಿ ಘೋಷಿಸುವ ಮೊದಲು ಮೋದಿ ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತು ಹಿರಿಯ ನಾಯಕ ಎಲ್‌. ಕೆ. ಆಡ್ವಾಣಿಯ ಜತೆಗೆ ಸಮಾಲೋಚನೆ ನಡೆಸಿದ್ದಾರೆ.

ಮಹಾ ಚುನಾವಣೆಗೆ ಪೂರ್ವಭಾವಿಯಾಗಿ ಮೋದಿ ದೇಶವ್ಯಾಪಿ ಪ್ರವಾಸ ಕೈಗೊಂಡು ತನ್ನ ಗುಜರಾತ್‌ ಮಾದರಿ ಅಭಿವೃದ್ಧಿಯನ್ನು ಜನಪ್ರಿಯಗೊಳಿಸಲಿದ್ದಾರೆ. ಎ.9ರಂದು ಕೋಲ್ಕತದಲ್ಲಿ ಕೈಗಾರಿಕೋದ್ಯಮಿಗಳನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮುಂಬಯಿಯಲ್ಲಿ ಹಿಂದಿನ ತಿಂಗಳು ಮೋದಿಯ ಬೃಹತ್‌ ರ್ಯಾಲಿ ನಡೆಯಬೇಕಿತ್ತು. ಆದರೆ ಮಹಾರಾಷ್ಟ್ರ ಬರಕ್ಕೆ ತುತ್ತಾಗಿರುವುದರಿಂದ ಈ ಅದ್ದೂರಿ ರ್ಯಾಲಿಯನ್ನು ರದ್ದುಪಡಿಸಲಾಗಿತ್ತು.

ಬಿಜೆಪಿಯ 33ನೇ ಸಂಸ್ಥಾಪನಾ ದಿನವಾದ ಎ.6ರಂದು ಗುಜರಾತಿನಲ್ಲಿ ಬೃಹತ್‌ ಸಮಾರಂಭವೊಂದು ಜರಗಲಿದ್ದು, ಇದರಲ್ಲಿ ರಾಜನಾಥ್‌ ಸಿಂಗ್‌ ಸಹಿತ ಅನೇಕ ಹಿರಿಯ ನಾಯಕರು ಭಾಗವಹಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ