ಗುಜರಾತ್: ದಲಿತರ ಮೇಲೆ ಹಲ್ಲೆ ನಡೆಸಿದ 22 ಆರೋಪಿಗಳ ಬಂಧನ

ಮಂಗಳವಾರ, 16 ಆಗಸ್ಟ್ 2016 (20:37 IST)
ಉನಾ ಪಟ್ಟಣದಲ್ಲಿ ಪ್ರತಿಭಟನೆ ಅಂತ್ಯಗೊಳಿಸಿ ಮರಳುತ್ತಿರುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆಯಲ್ಲಿ 22 ಜನರನ್ನು ಪೊಲೀಸರು ಬಂಧಿಸಿದ್ದಾರೆ.
 
ಉನಾ ಪಟ್ಟಣದ ಹತ್ತಿರದಲ್ಲಿರುವ ಸಮತೇರ್ ಪಟ್ಟಣದಲ್ಲಿ ಸಾಗುತ್ತಿದ್ದ ದಲಿತರನ್ನು ಗುರಿಯಾಗಿಸಿಕೊಂಡು ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಪೊಲೀಸರು ಗುಂಪನ್ನು ಚದುರಿಸಲು ಪ್ರಯತ್ನಿಸಿದಾಗ ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಲಾಗಿತ್ತು.
 
ಉನಾ ಪಟ್ಟಣದಲ್ಲಿ ಪ್ರತಿಭಟನೆ ಅಂತ್ಯಗೊಳಿಸಿ ಮರಳುತ್ತಿರುವ ಸಂದರ್ಭದಲ್ಲಿ ಕೆಲ ಕಿಡಿಗೇಡಿಗಳು ರಸ್ತೆ ತಡೆ ನಡೆಸಿ ದಲಿತರು ಆಗಮಿಸುತ್ತಿದ್ದಂತೆ ದಾಳಿ ನಡೆಸಲಾಗಿದೆ. ಗುಂಪುಗಳನ್ನು ಚದುರಿಸಲು 46 ಟಿಯರ್ ಗ್ಯಾಸ್ ಶೆಲ್‌ಗಳು ಸೇರಿದಂತೆ ಗಾಳಿಯಲ್ಲಿ ಆರು ಸುತ್ತಿನ ಗುಂಡಿನ ದಾಳಿ ನಡೆಸಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಆರ್.ಚೌಧರಿ ತಿಳಿಸಿದ್ದಾರೆ.
 
ದಲಿತರು ಮತ್ತು ಪೊಲೀಸರ ಮೇಲೆ ದಾಳಿ ನಡೆಸಿದ 22 ಜನರನ್ನು ಬಂಧಿಸಲಾಗಿದ್ದು, ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
 
ಕೆಲವರ ವಿರುದ್ಧ ಹತ್ಯಾಯತ್ನ, ದರೋಡೆ, ಹಿಂಸಾಚಾರಕ್ಕೆ ಪ್ರೇರಣೆ ನೀಡಿದ ಆರೋಪಗಳನ್ನು ಹೊರಿಸಲಾಗಿದೆ ಎಂದು ಉನಾ ಜಿಲ್ಲೆಯ ಪೊಲೀಸ್ ಅಧಿಕಾರಿ ಎಚ್.ಜಿ. ವಾಘೇಲಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ