ಕಾಶ್ಮೀರ: 3 ತಿಂಗಳಲ್ಲಿ 25 ಶಾಲೆ ಭಸ್ಮ

ಭಾನುವಾರ, 30 ಅಕ್ಟೋಬರ್ 2016 (13:09 IST)
ಹಿಜ್ಬುಲ್ ಮುಜಾಹಿದ್ದೀನ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ ಬಳಿಕ ಕಣಿವೆ ನಾಡು ಕಾಶ್ಮೀರದಲ್ಲಿ ಉಂಟಾಗಿರುವ ಹಿಂಸಾಚಾರದಲ್ಲಿ ಅನೇಕ ಜೀವಗಳು ಬಲಿಯಾಗಿವೆ. ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಈ ಉದ್ವಿಗ್ನತೆಯ ಬಿಸಿ ಶಿಕ್ಷಣ ವ್ಯವಸ್ಥೆಗೂ ತಟ್ಟಿದ್ದು ರಾಜ್ಯದಲ್ಲಿ ಕಳೆದ ಮೂರು ತಿಂಗಳಲ್ಲಿ ಒಟ್ಟು 25 ಶಾಲೆಗಳಿಗೆ ಬೆಂಕಿ ಹಚ್ಚಲಾಗಿದೆ, 
 
ಶನಿವಾರ ಸಂಜೆ, ದಕ್ಷಿಣ ಅನಂತನಾಗ್ ಜಿಲ್ಲೆಯ ಬಟ್ಗುಂದದಲ್ಲಿ ಖಾಸಗಿ ಶಾಳೆಯೊಂದಕ್ಕೆ ಬೆಂಕಿ ಹಚ್ಚಲಾಗಿದ್ದು, ಪೀಠೋಪಕರಣಗಳೆಲ್ಲ ಸುಟ್ಟು ಬೂದಿಯಾಗಿದೆ. ಇದು ದುಷ್ಕರ್ಮಿಗಳ ಅಟ್ಟಹಾಸಕ್ಕೆ ತುತ್ತಾದ 25ನೇ ಶಾಲೆಯಾಗಿದೆ ಎಂದು ರಾಜ್ಯ ಶಿಕ್ಷಣ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. 
 
 ಜುಲೈ 9 ರಂದು ಪ್ರತ್ಯೇಕತಾವಾದಿಗಳು ಬಂದ್‌ಗೆ ಕರೆ ನೀಡಿದ ಬಳಿಕ ಕಾಶ್ಮೀರದ ಪರಿಸ್ಥಿತಿ ಈಗಲೂ ಬೂದಿ ಮುಚ್ಚಿದ ಕೆಂಡದಂತಿದೆ. ಸತತ 52 ದಿನಗಳ ಕಾಲ ರಾಜ್ಯದಲ್ಲಿ ಕರ್ಫ್ಯೂವನ್ನು ಕೂಡ ಹೇರಲಾಗಿತ್ತು.
 
ಅಧಿಕಾರಿಗಳು ಹೇಳುವ ಪ್ರಕಾರ ಇಲ್ಲಿಯವರೆಗೆ 25 ಶಾಲೆಗಳನ್ನು ಗುರಿಯಾಗಿಸಲಾಗಿದೆ. ಅದರಲ್ಲಿ ಕುಲ್ಗಾಮ್ ಜಿಲ್ಲೆಯೊಂದರಲ್ಲಿಯೇ 7 ಶಾಲೆಗಳು ಬೆಂಕಿಗಾಹುತಿಯಾಗಿವೆ. ಬುಡ್ಗಾಮ್‌ನಲ್ಲಿ ನಾಲ್ಕು, ಬಾರಾಮುಲ್ಲಾದಲ್ಲಿ ಮೂರು, ಶೊಪಿಯಾನ್, ಬಂಡಿಪೊರ್, ಗಂದೇರ್ಬಾಲ್, ಅನಂತ್ ನಾಗ್ ಜಿಲ್ಲೆದಗಳಲ್ಲಿ ತಲಾ ಎರಡು,ಮತ್ತು ಪುಲ್ವಾಮಾ, ಕುಪ್ವಾರಾ, ಶ್ರೀನಗರಗಳಲ್ಲಿ ತಲಾ ಒಂದು ಶಾಲೆಗಳು ದುಷ್ಕರ್ಮಿಗಳ ದಾಹಕ್ಕೆ ಬಲಿಯಾಗಿವೆ. ಅದರಲ್ಲಿ 11 ಶಾಲೆಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದರೆ ಮತ್ತೆ 14 ಭಾಗಶಃ ಹಾನಿಗೊಳಗಾಗಿವೆ.
 
25 ಶಾಲೆಗಳನ್ನು ಸುಟ್ಟಿರುವುದು 4,500ಕ್ಕೂ ಹೆಚ್ಚು ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಪರಿಣಾಮ ಬೀರಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ