ಭಾರತದೊಳಗೆ ದಾಳಿ ನಡೆಸಲು ಉಗ್ರರಿಗೆ ಹಫೀಜ್ ಸಯೀದ್ ಪ್ರಚೋದನೆ: ಬಿಎಸ್‌ಎಫ್

ಗುರುವಾರ, 26 ನವೆಂಬರ್ 2015 (19:30 IST)
ಭಾರತದ ಮೇಲೆ ದಾಳಿ ನಡೆಸುವಂತೆ ಜಮಾತ್ ಉದ್ ದಾವಾ ಮುಖ್ಯಸ್ಥ ಹಫೀಜ್ ಸಯೀದ್ ಪ್ರಚೋದನೆ ನೀಡುತ್ತಿದ್ದಾರೆ ಎಂದು ಬಿಎಸ್‌ಎಫ್ ಮೂಲಗಳು ತಿಳಿಸಿವೆ.
 
ಭಾರತದ ಗಡಿಯಲ್ಲಿರುವ ಪಾಕ್ ಉಗ್ರರ ಶಿಬಿರಗಳಿಗೆ ಭೇಟಿ ನೀಡುತ್ತಿರುವ ಸಯೀದ್, ಭಾರತದೊಳಗೆ ಪ್ರವೇಶಿಸಿ ದಾಳಿ ನಡೆಸುವಂತೆ ಒತ್ತಡ ಹೇರುತ್ತಿರುವುದಾಗಿ ಬಿಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.
 
ಪಾಕ್ ಗಡಿಯಲ್ಲಿರುವ ಉಗ್ರ ಶಿಬಿರಗಳಿಗೆ ಭೇಟಿ ನೀಡಲು ಪಾಕಿಸ್ತಾನದ ಸೇನಾಪಡೆಗಳು ಅವಕಾಶ ನೀಡುತ್ತಿವೆ ಎಂದು ಬಿಎಸ್ಎಫ್ ಪೊಲೀಸ್ ಮಹಾನಿರ್ದೇಶಕ ರಾಕೇಶ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
 
ಹಫೀಜ್ ಸಯೀದ್ ನಿರಂತರವಾಗಿ ಉಗ್ರರನ್ನು ಪ್ರೇರೇಪಿಸಿ ಉಗ್ರರ ಶಿಬಿರಗಳಲ್ಲಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡುತ್ತಿದ್ದಾನೆ. ಭಾರತವೇ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ ಎಂದು ಸುಳ್ಳು ಮಾಹಿತಿ ರವಾನಿಸುತ್ತಿದ್ದಾನೆ ಎಂದು ಹೇಳಿದ್ದಾರೆ. 
 
ಭಾರತ-ಪಾಕ್ ಗಡಿಯಲ್ಲಿ ಉಗ್ರರ ಶಿಬಿರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶರ್ಮಾ, ಪಾಕ್ ಗಡಿಯಲ್ಲಿ ಉಗ್ರರ ಶಿಬಿರಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದಲ್ಲದೇ ಪ್ರಚೋದನಾಕಾರಿ ಭಾಷಣಗಳು, ಉಗ್ರರ ದಾಳಿಗೆ ಕುಮ್ಮಕ್ಕು ನೀಡುವಂತಹ ಕೃತ್ಯಗಳಲ್ಲಿ ಹೆಚ್ಚಳವಾಗಿದೆ ಎಂದು ತಿಳಿಸಿದ್ದಾರೆ.  
 
ಮುಂಬೈ ದಾಳಿಯ ರೂವಾರಿ ಉಗ್ರ ಹಫೀಜ್ ಸಯೀದ್, ಪಾಕಿಸ್ತಾನದ ಗಡಿಯಲ್ಲಿರುವ ಸಿಯಾಲ್ ಕೋಟ್ ಸೇರಿದಂತೆ ಇತರ ಗಡಿ ಭಾಗಗಳಿಗೆ ಭೇಟಿ ನೀಡುತ್ತಿದ್ದಾನೆ ಎಂದು ಬಿಎಸ್ಎಫ್ ಪೊಲೀಸ್ ಮಹಾನಿರ್ದೇಶಕ ರಾಕೇಶ್ ಶರ್ಮಾ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ