2ಜಿ ತರಂಗಾಂತರ ಹಂಚಿಕೆ ಹಗರಣ: ಮಾಜಿ ಸಚಿವ ಎ.ರಾಜಾಗೆ ಸುಳ್ಳು ಹೇಳುವ ಹವ್ಯಾಸವಿದೆ ಎಂದ ಸಿಬಿಐ

ಬುಧವಾರ, 2 ಸೆಪ್ಟಂಬರ್ 2015 (20:53 IST)
2ಜಿ ತರಂಗಾಂತರ ಹಂಚಿಕೆ ಹಗರಣದ ಪ್ರಮುಖ ಆರೋಪಿ ಮಾಜಿ ಕೇಂದ್ರ ಸಚಿವ ಎ.ರಾಜಾಗೆ ಸುಳ್ಳು ಹೇಳುವ ಹವ್ಯಾಸವಿದ್ದು, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ದಾರಿ ತಪ್ಪಿಸಿದ್ದರು ಎಂದು ಸಿಬಿಐ ಆರೋಪಿಸಿದೆ.
  
2ಜಿ ತರಂಗಾಂತರ ಹಂಚಿಕೆಯಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಂಡು ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ತಮಗೆ ಮಾಹಿತಿ ನೀಡುವಂತೆ ಅಂದಿನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮಾಜಿ ಸಚಿವ ಎ.ರಾಜಾ ಅವರಿಗೆ ಪತ್ರ ಬರೆದಿದ್ದರೂ ಎ.ರಾಜಾ ಉದ್ದೇಶಪೂರ್ವಕವಾಗಿ ಸಿಂಗ್ ಅವರಿಗೆ ಸುಳ್ಳು ಮಾಹಿತಿ ನೀಡಿದ್ದರು ಎಂದು ಸರಕಾರಿ ವಿಶೇಷ ಅಭಿಯೋಜಕ ಆನಂದ್ ಗ್ರೋವರ್ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದರು.    
 
ಮಾಜಿ ಕೇಂದ್ರ ಸಚಿವ ಎ.ರಾಜಾ, ಪ್ರಧಾನಮಂತ್ರಿಯವರಿಗೆ ತಪ್ಪು ಮಾಹಿತಿಗಳನ್ನೊಳಗೊಂಡ ಪತ್ರ ಬರೆದಿರುವುದು ಸ್ಪಷ್ಟವಾಗಿದೆ. ಪ್ರಧಾನಿಗೆ ತಾನು ಹೇಳುತ್ತಿರುವುದೆಲ್ಲಾ ಸುಳ್ಳು ಎನ್ನುವುದು ರಾಜಾ ಅವರಿಗೆ ಗೊತ್ತಿತ್ತು ಎಂದು ಗ್ರೋವರ್, ವಿಶೇಷ ನ್ಯಾಯಾಧೀಶ ಒ.ಪಿ.ಸೈಯಾನಿಗೆ ತಿಳಿಸಿದ್ದಾರೆ.  
 
ರಾಜಾಗೆ ಸುಳ್ಳು ಹೇಳಿಕೆ ನೀಡುವ ಹವ್ಯಾಸವಿದೆ. ಪ್ರಧಾನಿಯವರಿಗೂ ಸುಳ್ಳು ಮಾಹಿತಿ ನೀಡಿದ್ದಾರೆ. 2ಜಿ ತರಂಗಾಂತರ ಹಂಚಿಕೆ ಪಡೆಯಲು ಒಟ್ಟು 575 ಕಂಪೆನಿಗಳು ಅರ್ಜಿ ಸಲ್ಲಿಸಿದ್ದವು. ಆದರೆ, ಮಾಜಿ ಸಚಿವ ರಾಜಾ 408 ಅರ್ಜಿಗಳನ್ನು ರೇಸ್‌ನಿಂದ ಹೊರಗಿಟ್ಟಿದ್ದರು ಎಂದು ಗ್ರೋವರ್ ವಾದ ಮಂಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ