2ಜಿ ಹಗರಣ: ದೆಹಲಿ ಸಿಬಿಐ ಕೋರ್ಟ್‌ನಿಂದ ಎ.ರಾಜಾ. ಕನಿಮೋಳಿ, ಬಲ್ವಾಗೆ ಜಾಮೀನು ಮಂಜೂರು

ಬುಧವಾರ, 20 ಆಗಸ್ಟ್ 2014 (15:18 IST)
ದೇಶಾದ್ಯಂತ ಕುತೂಹಲ ಕೆರಳಿಸಿದ್ದ 2ಜಿ ಹಗರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಮಾಜಿ ಟೆಲಿಕಾಂ ಸಚಿವ ಎ.ರಾಜಾ.ಡಿಎಂಕೆ ಸಂಸದೆ ಕನಿಮೋಳಿ ಮತ್ತು ಸ್ವಾನ್ ಟೆಲಿಕಾಂ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಶಾಹಿದ್ ಉಸ್ಮಾನ್ ಬಲ್ವಾಗೆ ದೆಹಲಿ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ   
 
ದೆಹಲಿ ಸಿಬಿಐ ನ್ಯಾಯಾಲಯದ ನ್ಯಾಯಮೂರ್ತಿ ಒ.ಪಿ.ಸೈಯಾನಿ, ಪ್ರಕರಣದ ಮತ್ತೊಬ್ಬ ಆರೋಪಿಯಾದ 83 ವರ್ಷ ವಯಸ್ಸಿನ ಅಮ್ಮಲ್( ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಪತ್ನಿ)ಗೆ 5 ಲಕ್ಷ ರೂಪಾಯಿಗಳ ಎರಡು ವೈಯಕ್ತಿತ ಭದ್ರತಾ ಬಾಂಡ್ ನೀಡುವಂತೆ ಆದೇಶಿಸಿ ಜಾಮೀನು ನೀಡಿದ್ದಾರೆ.  
 
ಆರೋಗ್ಯ ಸರಿಯಾಗಿಲ್ಲ. ಮಾನಸಿಕ ರೋಗದಿಂದ ಬಳಲುತ್ತಿರುವುದರಿಂದ 2ಜಿ ಪ್ರಕರಣದಿಂದ ಮುಕ್ತಗೊಳಿಸಬೇಕು ಎನ್ನುವ ಅಮ್ಮಾಲ್ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.  
 
ಜಾರಿ ನಿರ್ದೇಶನಾಲಯ ಸಲ್ಲಿಸಿದ 2ಜಿ ಹಗರಣದ ಆರೋಪ ಪಟ್ಟಿಯ ಬಗ್ಗೆ ಆಗಸ್ಟ್ 6 ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಆರೋಪಿಗಳಾದ ರಾಜಾ ಮತ್ತು ಕನಿಮೋಳಿ ಜಾಮೀನು ಅರ್ಜಿ ವಿಚಾರಣೆಯನ್ನು ಇವತ್ತಿಗೆ ಮುಂದೂಡಿತ್ತು.  
 
2ಜಿ ಹಗರಣ ಕುರಿತಂತೆ ಜಾರಿ ನಿರ್ದೇಶನಾಲಯ 10 ಮಂದಿ ಆರೋಪಿಗಳು ಮತ್ತು 9 ಸಂಸ್ಥೆಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದು, ಒಟ್ಟು 200 ಕೋಟಿ ರೂ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದೆ. 
 

ವೆಬ್ದುನಿಯಾವನ್ನು ಓದಿ