4 ಖಾಲಿ ಹುದ್ದೆ ತುಂಬಲು ಸೋನಿಯಾ-ಪಿಎಂ ಚರ್ಚೆ

ಶನಿವಾರ, 9 ಜುಲೈ 2011 (15:49 IST)
PTI
ಮುಂದಿನ ವಾರಾರಂಭದಲ್ಲಿ ಕೇಂದ್ರ ಸಂಪುಟ ಪುನಾರಚನೆಯಾಗುವುದು ಬಹುತೇಕ ಖಚಿತವಾಗಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಕಾಂಗ್ರೆಸ್ ಹಾಗೂ ಯುಪಿಎ ಮೈತ್ರಿಕೂಟದ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದರು.

2ಜಿ ಹಗರಣದ ಹಿನ್ನೆಲೆಯಲ್ಲಿ ಜವುಳಿ ಖಾತೆ ಸಚಿವ ದಯಾನಿಧಿ ಮಾರನ್ ರಾಜೀನಾಮೆ ನೀಡಿದ್ದಾರೆ. ಅದಕ್ಕೂ ಮೊದಲು, ಸಂಪುಟ ಪುನಾರಚನೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವ ಮುರಳಿ ದಿಯೋರಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಂತೆಯೇ ಎ.ರಾಜಾ ಅವರಿಂದಲೂ ಟೆಲಿಕಾಂ ಹುದ್ದೆ ತೆರವಾಗಿ ಅವರು ಜೈಲಿನಲ್ಲಿದ್ದಾರೆ. ರೈಲ್ವೇ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿಯಾಗಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆಯೊಂದಿಗೆ ಪುನಾರಚನೆಯೂ ಅನಿವಾರ್ಯವಾಗಿದೆ.

ಇನ್ನೊಂದೆಡೆ ಯುಪಿಎಯ ಅಂಗಪಕ್ಷವಾಗಿರುವ ಡಿಎಂಕೆಯಿಂದ ಇಬ್ಬರು ಸಂಪುಟ ಸಚಿವರು ಸ್ಥಾನ ತೊರೆದಿರುವ ಹಿನ್ನೆಲೆಯಲ್ಲಿ, ಅದಕ್ಕೆ ಸಲ್ಲಬೇಕಾಗಿರುವ ಪಾಲಿಗಾಗಿ ಕೇಂದ್ರದ ಹಿರಿಯ ಸಚಿವ ಪ್ರಣಬ್ ಮುಖರ್ಜಿ ಅವರು ಶನಿವಾರ ಗುರುವಾರ ಚೆನ್ನೈಗೆ ತೆರಳಿ ಡಿಎಂಕೆ ಅಧ್ಯಕ್ಷ ಎಂ.ಕರುಣಾನಿಧಿ ಜೊತೆ ಮಾತುಕತೆ ನಡೆಸಿದ್ದು, ಪ್ರಸಕ್ತ ರಾಜಕೀಯ ಚಟುವಟಿಕೆಗಳ ಕುರಿತು ಚರ್ಚಿಸಿದ್ದಾರೆ. 2 ಜಿ ಹಗರಣಕ್ಕಾಗಿಯೇ ರಾಜೀನಾಮೆ ನೀಡಿದ ಮಾರನ್ ಮತ್ತು ರಾಜಾ ಸ್ಥಾನಕ್ಕೆ ಡಿಎಂಕೆಯಿಂದ ಯಾರನ್ನು ನೇಮಿಸಬೇಕೆಂದು ಕರುಣಾನಿಧಿ ಹೇಳಿದ್ದಾರೆಯೇ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ಇದಲ್ಲದೆ, ವಿದೇಶಾಂಗ ಸಚಿವರಾಗಿ ಎಸ್.ಎಂ.ಕೃಷ್ಣ ಅವರ ಕಾರ್ಯ ನಿರ್ವಹಣೆಯ ಬಗೆಗೂ ಅಪಸ್ವರ ಕೇಳಿಬರುತ್ತಿದೆ. ಅಂತೆಯೇ ಕಪಿಲ್ ಸಿಬಲ್ (ಟೆಲಿಕಾಂ, ಮಾನವ ಸಂಪನ್ಮೂಲ ಅಭಿವೃದ್ಧಿ), ಪಿ.ಕೆ.ಬನ್ಸಾಲ್ (ವಿಜ್ಞಾನ ತಂತ್ರಜ್ಞಾನ, ಭೂವಿಜ್ಞಾನ ಮತ್ತು ಸಂಸದೀಯ ವ್ಯವಹಾರ) ಮುಂತಾದವರು ಹಲವು ಖಾತೆಗಳನ್ನು ಹೊಂದಿದ್ದಾರೆ. ಹೀಗಾಗಿ ಇನ್ನುಳಿದ ಸುಮಾರು ಎರಡುವರೆ ವರ್ಷ ಅವಧಿಗೆ ಸೂಕ್ತ ಮಾರ್ಪಾಟು ಮಾಡಬೇಕಿರುವುದು ಅಗತ್ಯವಿದೆ. ಮುಂದಿನ ವರ್ಷ ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದ ಕೆಲವರಿಗೆ ಸಚಿವ ಪಟ್ಟ ನೀಡುವುದು, ಅಥವಾ ಸಂಪುಟ ದರ್ಜೆಗೇರಿಸುವುದು, ಸರಿಯಾಗಿ ಕೆಲಸ ಮಾಡದ ಸಚಿವರನ್ನು ಕೈಬಿಡುವುದು... ಇವೆಲ್ಲವೂ ಮಾತುಕತೆಯ ಮಧ್ಯೆ ನುಸುಳಿದೆ ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ