9 ತರಗತಿ ಓದುತ್ತಿದ್ದಾಳೆ 4ರ ಬಾಲಕಿ

ಮಂಗಳವಾರ, 23 ಆಗಸ್ಟ್ 2016 (13:02 IST)
4 ವರ್ಷದ ಪುಟ್ಟ ಮಕ್ಕಳು ಏನನ್ನು ಬರೆಯಬಹುದು, ಏನನ್ನು ಓದಬಹುದು ಹೇಳಿ. ಅ, ಆ , A,B,C,D?. ಅತಿ ಬುದ್ಧಿವಂತರಾದರೆ ಸಂಪೂರ್ಣ ವರ್ಣಮಾಲೆಯನ್ನು ಬರೆಯಬಹುದು. ಆದರೆ ಉತ್ತರ ಪ್ರದೇಶದ 4ರ ಹರೆಯದ ಬಾಲಕಿ ಅನನ್ಯ ಅಸಾಮಾನ್ಯ ಬುದ್ಧಿವಂತರ ಸಾಲಿಗೆ ಸೇರುತ್ತಾಳೆ. ಆಕೆ ನೇರವಾಗಿ 9 ನೇ ತರಗತಿಗೆ ಅಧಿಕೃತ ಪ್ರವೇಶ ಪಡೆದಿದ್ದಾಳೆ. ಮತ್ತೂ ವಿಶೇಷ ಸಂಗತಿ ಎಂದರೆ ಆಕೆಯ ಸಂಪೂರ್ಣ ಕುಟುಂಬವೇ ಅಸಾಮಾನ್ಯ ಬುದ್ಧಿವಂತಿಕೆಗೆ ಹೆಸರಾಗಿದೆ. ಆಕೆಯ ಹೆಸರು ಸದ್ಯದಲ್ಲಿಯೇ ಲಿಮ್ಕಾ ಬುಕ್ ರೆಕಾರ್ಡ್‌ನಲ್ಲಿ ಸೇರುವ ಸಾಧ್ಯತೆಗಳಿವೆ. 


 
ಶಿಕ್ಷಣ ಇಲಾಖೆಯ ಒಪ್ಪಿಗೆಯೊಂದಿಗೆ ನಾಲ್ಕು ವರ್ಷ- 8 ತಿಂಗಳು- 21 ದಿನಗಳ ಅನನ್ಯ ಈಗ 9ನೇ ತರಗತಿಗೆ ಪ್ರವೇಶ ಪಡೆದಿದ್ದಾಳೆ.  ಈಕೆಯ 15 ವರ್ಷದ ಅಕ್ಕ ಸುಷ್ಮಾ ಮೈಕ್ರೋಬಯೋಲಜಿಯಲ್ಲಿ ಡಾಕ್ಟರ್ ಪದವಿ ಅಭ್ಯಸಿಸುತ್ತಿದ್ದಾಳೆ. ಅಣ್ಣ ಶೈಲೇಂದ್ರ 9ನೇ ವಯಸ್ಸಿಗೆ ಹೈಸ್ಕೂಲ್ ಮುಗಿಸಿದ್ದಾನೆ. ಇದೀಗ ಅನನ್ಯ ಕೂಡ ಅಂಗನವಾಡಿ, ಪ್ರಾಥಮಿಕ ಶಾಲೆಗೆ ಹೋಗದೇ ನೇರವಾಗಿ 9ನೇ ತರಗತಿಗೆ ದಾಖಲಾಗಿದ್ದಾಳೆ.
 
ಈ ಪ್ರಚಂಡ ಬುದ್ಧಿವಂತ ಕುಟುಂಬದ ಕೊನೆಯ ಕುಡಿ ಅನನ್ಯ. ಆಕೆಯ ತಂದೆ ತೇಜ್ ಬಹಾದೂರ್ ವರ್ಮಾ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾಲಯದಲ್ಲಿ ಸೂಪರ್‌ವೈಸರ್ ಆಗಿದ್ದಾರೆ. ಇತ್ತೀಚಿಗೆ ಅವರು ತಮ್ಮ ಹಿರಿಯ ಮಕ್ಕಳಿಬ್ಬರು ಓದಿದ ಶಾಲೆಯ ಶಿಕ್ಷಕಿಯನ್ನು ಭೇಟಿಯಾಗಿ ಮಾತನ್ನಾಡುತ್ತಿದ್ದಾಗ, ಅವರ ಜತೆಗಿದ್ದ ಪುಸ್ತಕವೊಂದನ್ನು ಎತ್ತಿಕೊಂಡು ಅನನ್ಯ ಓದ ಹತ್ತಿದಳು. ಇದನ್ನು ಕಂಡು ಆಶ್ಚರ್ಯ ಚಕಿತಳಾದ ಶಿಕ್ಷಕಿ ತಂದೆ-ಮಗಳನ್ನು ಮನೆಗೆ ಕರೆಸಿದಳು. ಆಕೆಯನ್ನು ಪರೀಕ್ಷೆಗೊಳಪಡಿಸಿದಾಗ ಆಕೆಯ ಬುದ್ಧಿಮತ್ತೆ 9 ನೇ ತರಗತಿ ಮಟ್ಟದ್ದು ಎಂಬುದು ಅವರ ಅರಿವಿಗೆ ಬಂತು. ಹೀಗಾಗಿ ಆಕೆಯನ್ನು ನೇರವಾಗಿ 9 ನೇ ತರಗತಿಗೆ ದಾಖಲಿಸಿ ಕೊಳ್ಳಲು ಜಿಲ್ಲಾ ಇನ್ಸಪೆಕ್ಟರ್ ಜತೆ ಅನುಮತಿ ಕೇಳಲಾಗಿತ್ತು. ಮತ್ತೀಗ ಅದಕ್ಕೆ ಸಮ್ಮತಿಯೂ ದೊರಕಿದೆ. 
 
ತನ್ನ ಅಣ್ಣ ಮತ್ತು ಅಕ್ಕನಿಗಿಂತ ಅನನ್ಯ ಹೆಚ್ಚು ಬುದ್ಧಿವಂತಳು ಎಂದು ಶಾಲೆಯ ವ್ಯವಸ್ಥಾಪಕರಾದ ವಿನೋದ್ ರಾತ್ರಾ ಅಭಿಪ್ರಾಯ ಪಡುತ್ತಾರೆ. 
 
ಎರಡು ವರ್ಷದ ಬಳಿಕ ಆಕೆ ಯುಪಿ ಬೋರ್ಡ್ ಪರೀಕ್ಷೆಯನ್ನು ಎದುರಿಸಲಿದ್ದಾಳೆ. ಪರೀಕ್ಷೆಯಲ್ಲಿ ಪಾಸಾದರೆ ಆಕೆ ತನ್ನದೇ ಅಕ್ಕ ಸುಷ್ಮಾ ದಾಖಲೆಯನ್ನು ಮುರಿಯಲಿದ್ದಾಳೆ. ಸದ್ಯ ಅನನ್ಯ ಓದುತ್ತಿರುವ ಶಾಲೆ ಸೈಂಟ್ ಮೀರಾ ಇಂಟರ್ ಕಾಲೇಜ್ ಲಕ್ನೋನಲ್ಲಿಯೇ  9 ನೇ ತರಗತಿಗೆ ದಾಖಲಾತಿ ಪಡೆದಾಗ ಆಕೆಯ ಅಕ್ಕ 5 ವರ್ಷದವಳಾಗಿದ್ದಳು, 7+ ವಯಸ್ಸಿಗೆ 2007ರಲ್ಲಿ ಆಕೆ 10ನೇ ತರಗತಿಯನ್ನು ಪಾಸ್ ಮಾಡಿದ್ದಳು. 
 
ನಮ್ಮ ಮೂವರು ಮಕ್ಕಳ ಈ ಪ್ರಚಂಡ ಬುದ್ಧಿವಂತಿಕೆ ದೇವರ ಕೊಡುಗೆ ಎನ್ನುತ್ತಾರೆ ತೇಜ್ ಬಹಾದ್ದೂರ್.
 
ಯುಪಿ ಬೋರ್ಡ್ 8 ನೇ ತರಗತಿವರೆಗೆ ಮಾತ್ರ ಮನೆಯಿಂದ ಓದಲು ಅವಕಾಶ ಕೊಡುತ್ತದೆ. ಈಗ ಹಿಂದಿಯನ್ನು ಸ್ಪಷ್ಟವಾಗಿ ಮಾತನಾಡುತ್ತಿರುವ ಅನನ್ಯಾ ಪ್ರತಿಭಾವಂತೆ. ಆಕೆ 9 ನೇ ತರಗತಿ ಪುಸ್ತಕವನ್ನು ನಿರಾಯಾಸವಾಗಿ ಓದುತ್ತಾಳೆ ಎಂದು ಖುಷಿ ಪಡುತ್ತಾರೆ ಶಾಲೆಗಳ ಜಿಲ್ಲಾ ಇನ್ಸಪೆಕ್ಟರ್ ಉಮೇಶ್ ತಿರುಪತಿ.

ವೆಬ್ದುನಿಯಾವನ್ನು ಓದಿ