ವಾರಣಾಸಿಯಲ್ಲಿ 43 ಎದುರಾಳಿಗಳನ್ನು ಎದುರಿಸಲಿದ್ದಾರೆ ಮೋದಿ

ಶನಿವಾರ, 26 ಏಪ್ರಿಲ್ 2014 (09:27 IST)
ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸಲ್ಲಿಸಲಾಗಿದ್ದ 78 ನಾಮಪತ್ರಗಳಲ್ಲಿ 34 ನಾಮಪತ್ರಗಳನ್ನು ಚುನಾವಣಾ ಅಧಿಕಾರಿಗಳು ತಿರಸ್ಕರಿಸಿದ್ದಾರೆ. ಈಗ ಕಣದಲ್ಲಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ, ಆಪ್ ನಾಯಕ ಕೇಜ್ರಿವಾಲ್ ಸೇರಿದಂತೆ 44 ಜನರು ಉಳಿದು ಕೊಂಡಿದ್ದಾರೆ.
 
ಈ ಕ್ಷೇತ್ರದಲ್ಲಿ ನಾಮಪತ್ರ ತುಂಬಲು  ಗುರುವಾರ ಕೊನೆಯ ದಿನವಾಗಿತ್ತು. ಸಲ್ಲಿಸಲಾಗಿದ್ದ ನಾಮಪತ್ರಗಳನ್ನು ಶುಕ್ರವಾರ  ಪರಿಶೀಲಿಸಲಾಯಿತು. ಅವುಗಳಲ್ಲಿ 34 ನಾಮಪತ್ರಗಳನ್ನು ತಿರಸ್ಕರಿಸಲಾಯಿತು ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಅವುಗಳಲ್ಲಿ ಶ್ರೀಗಂಧದ ಕಳ್ಳ, ಡಕಾಯಿತ ವೀರಪ್ಪನ್, ಸೋದರಳಿಯ ಪಿ ಎನ್ ರಾಮಚಂದ್ರನ್  ಹೆಸರು ಕೂಡ ಸೇರಿದೆ. ಅವರು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. 
 
ರೋಚಕ ವಿಷಯವೇನೆಂದರೆ ಥೇಟ್ ಒಸಾಮಾ ಬಿನ್ ಲಾಡೆನ್ ತರಹ ಕಾಣುವ ಮೆರಾಜ್ ಖಾಲಿದ್ ನೂರ್ ಅವರ ನಾಮಪತ್ರವನ್ನು ಕೂಡ ತಿರಸ್ಕರಿಸಲಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿರುವ ಸ್ಥಾನಗಳಲ್ಲಿ ವಾರಣಾಸಿ ಕೂಡ ಒಂದಾಗಿದೆ. 
 
ಎಲ್ಲ 78 ಅಭ್ಯರ್ಥಿಗಳು ಕೂಡ ಕಣದಲ್ಲಿರುವಂತಾಗಿದ್ದರೆ, ಅದು ದಾಖಲೆಯಾಗುತ್ತಿತ್ತು.  ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನ ಎಪ್ರೀಲ್ 28. ಈ ಕ್ಷೇತ್ರದಿಂದ ಕಾಂಗ್ರೆಸ್ಸಿನಿಂದ ಅಜಯ್ ರಾಯ್, ಸಮಾಜವಾದಿ ಪಕ್ಷದಿಂದ ಕೈಲಾಸ್ ನಾಥ್ ಚೌರಾಸಿಯಾ, ಬಿಎಸ್‌ಪಿಯಿಂದ ವಿಜಯ್ ಪ್ರಕಾಶ್ ಜೈಶ್ವಾಲ್ ಸ್ಪರ್ಧಿಸುತ್ತಿದ್ದಾರೆ. 
 
ನರೇಂದ್ರ ಮೋದಿಯನ್ನು ಹೊರತು ಪಡಿಸಿ ನರೇಂದ್ರ ಎಂಬ ಹೆಸರಿನ ಮೂವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಅವರಲ್ಲಿ ಒಬ್ಬರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. 

ವೆಬ್ದುನಿಯಾವನ್ನು ಓದಿ