ವಿಶ್ವ ಯೋಗ ದಿನ ಆಚರಣೆ: ಮೋದಿ ಪ್ರಸ್ತಾವನೆಗೆ 50 ದೇಶಗಳ ಬೆಂಬಲ

ಶನಿವಾರ, 1 ನವೆಂಬರ್ 2014 (11:41 IST)
ಕಳೆದ ತಿಂಗಳು ವಿಶ್ವಸಂಸ್ಥೆಯ ಮಹಾಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡಿದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಂದ ಮಂಡಿಸಲ್ಪಟ್ಟ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುವ ಪ್ರಸ್ತಾವಕ್ಕೆ ಅಮೆರಿಕ, ಚೀನ, ಕೆನಡ ಸೇರಿದಂತೆ ವಿಶ್ವದ 50ಕ್ಕೂ ಹೆಚ್ಚು ದೇಶಗಳು ತಮ್ಮ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿವೆ.

ಪ್ರತಿ ವರ್ಷದ ಜೂನ್ ತಿಂಗಳ 21ನ್ನು ಅಂತರಾಷ್ಟ್ರೀಯ ಯೋಗ ದಿನವೆಂದು ಘೋಷಿಸುವ ನಿರ್ಣಯಕ್ಕೆ 50 ದೇಶಗಳು ಸಹಿ ಹಾಕಿದ್ದು, ಸದ್ಯದಲ್ಲೇ ಈ ನಿರ್ಣಯ ವಿಶ್ವಸಂಸ್ಥೆಯ ಸಚಿವಾಲಯಕ್ಕೆ ಸಲ್ಲಿಕೆಯಾಗಲಿದೆ. ಈ ವರ್ಷ ಕಳೆಯುವುದರೊಳಗೆ ಭಾರತದ ಪ್ರಾಚೀನ ಕಲೆಯಾದ ಯೋಗವನ್ನು ವಿಶ್ವವ್ಯಾಪಿಗೊಳಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಈ ಮಹತ್ವದ ಪ್ರಸ್ತಾವ ಸ್ವೀಕೃತವಾಗುವಂತೆ ಮಾಡಲು ಭಾರತ ಸರಕಾರ ತನ್ನಿಂದಾದ ಎಲ್ಲ ಯತ್ನಗಳನ್ನು ಮಾಡುತ್ತಿದೆ.
 
ಏಷ್ಯಾದ ಪ್ರಬಲ ರಾಷ್ಟ್ರಗಳಾಗಿರುವ ಚೀನ, ಜಪಾನ್‌, ಇಂಡೋನೇಶ್ಯ, ದಕ್ಷಿಣ ಕೊರಿಯ, ಆಫ್ರಿಕ ಖಂಡದ ದಕ್ಷಿಣ ಆಫ್ರಿಕ, ನೈಜೀರಿಯ, ನೆರೆಯದೇಶಗಳಾದ ಬಾಂಗ್ಲಾದೇಶ, ಭೂತಾನ್ , ನೇಪಾಳ, ಶ್ರೀಲಂಕಾ ,ಲ್ಯಾಟಿನ್‌ ಅಮೆರಿಕದ ದೇಶಗಳಾದ ಬ್ರೆಜಿಲ್‌, ಅರ್ಜೈಂಟೈನಾ ಮತ್ತಿತರ ರಾಷ್ಟ್ರಗಳು ಯೋಗಕ್ಕೆ ವಿಶ್ವ ಮನ್ನಣೆ ಕೊಡುವ ಭಾರತದ ಪ್ರಸ್ತಾಪಕ್ಕೆ ಸಹಯೋಗ ವ್ಯಕ್ತ ಪಡಿಸಿವೆ. 
 
ಅಮೆರಿಕ ಮತ್ತು ಕೆನಡಗಳು ಕೂಡ ಈ ನಿಟ್ಟಿನಲ್ಲಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿರುವುದರಿಂದ ಐರೋಪ್ಯ ಒಕ್ಕೂಟದ ದೇಶಗಳು ಕೂಡ ಈ ಪ್ರಸ್ತಾವನೆಗೆ ಸಹಿ ಹಾಕುವ ಸಾಧ್ಯತೆ ಇದೆ. ಹೀಗಾದರೆ ನಿರ್ಣಯ ಹೆಚ್ಚು ವಿರೋಧವಿಲ್ಲದೆ ಅಂಗೀಕರಿಸಲ್ಪಡುತ್ತದೆ. 

ವೆಬ್ದುನಿಯಾವನ್ನು ಓದಿ