57 ರೂ. ಕದ್ದ ಆರೋಪಿ ಪೋಸ್ಟ್‌ಮ್ಯಾನ್‌ಗೆ 29 ವರ್ಷಗಳ ನಂತರ ದೋಷಮುಕ್ತಿ

ಮಂಗಳವಾರ, 3 ಡಿಸೆಂಬರ್ 2013 (18:45 IST)
PR
PR
ಕಾನ್ಪುರ: ನ್ಯಾಯದಾನ ವಿಳಂಬ ಕೇವಲ ನ್ಯಾಯನಿರಾಕರಣೆ ಮಾತ್ರವಲ್ಲ, ಅದು ಅತ್ಯಂತ ಕ್ರೂರ ಶಿಕ್ಷೆಯಾಗಿದೆ. ಪೋಸ್ಟ್‌ಮ್ಯಾನ್ ಉಮಾಕಾಂತ್ ಮಿಶ್ರಾ 30 ವರ್ಷಗಳ ಕಾಲ ಸರ್ಕಾರಿ ಕೆಲಸದಿಂದ ಅಮಾನತು ಶಿಕ್ಷೆಗೆ ಒಳಗಾಗಿದ್ದರು. ಅವರ ವಿರುದ್ಧ ಕೇವಲ 57. 60 ರೂ.ಗಳನ್ನು ಕದ್ದಿರುವ ಆರೋಪವನ್ನು ಹೊರಿಸಲಾಗಿತ್ತು. ಅವರು ಮೂರು ವರ್ಷಗಳ ಕೆಳಗೆ ನಿವೃತ್ತಿಯಾದರು. ಕಳೆದ ತಿಂಗಳು ಅಂದರೆ ಸುಮಾರು 29 ವರ್ಷಗಳ ನಂತರ ಕೋರ್ಟ್‌ ಅವರನ್ನು ದೋಷಮುಕ್ತಿಗೊಳಿಸಿತು. ಆದರೆ ಅಷ್ಟರೊಳಗೆ ಅವರು ಸಂಪೂರ್ಣ ಸೋತು, ನಿತ್ರಾಣವಾದ ವ್ಯಕ್ತಿಯಾಗಿದ್ದರು.

ಕಾನ್ಪುರದ ಹರಿಜಿಂದರ್ ನಗರದ ಅಂಚೆ ಕಚೇರಿಯಲ್ಲಿ ಉಮಾಕಾಂತ್ ಕೆಲಸ ಮಾಡುತ್ತಿದ್ದರು. ಮನಿ ಆರ್ಡರ್ ಕಳಿಸುವಂತೆ ಇಲಾಖೆ ಅವರಿಗೆ 697.60 ರೂ. ನಗದನ್ನು ಹಸ್ತಾಂತರಿಸಿತ್ತು. 697.60 ರೂ.ಗಳ ಪೈಕಿ ಉಮಾಕಾಂತ್ 300 ರೂ.ಗಳನ್ನು ವಿತರಿಸಿದರು ಮತ್ತು ಉಳಿದ ಹಣವನ್ನು ಹಿರಿಯ ಸಹೋದ್ಯೋಗಿಗಳಿಗೆ ಕೊಟ್ಟಿರುವುದಾಗಿ ವಾದಿಸಿದ್ದರು. ಆದರೆ ಅಂಚೆ ಅಧಿಕಾರಿಗಳು ಅವರ ವಿರುದ್ಧ 57.60 ರೂ. ಕದ್ದಿರುವ ಆರೋಪ ಹೊರಿಸಿ ಎಫ್ ಐಆರ್. ದಾಖಲು ಮಾಡಿದ್ದರು. ಈ ಘಟನೆ ನಡೆದದ್ದು, 1984ರ ಜು.13ನೇ ತಾರೀಖು. 57 ರೂ. ಕದ್ದಿದ್ದಕ್ಕಾಗಿ ಅವರ ವಿರುದ್ಧ ಕೇಸ್ ದಾಖಲು ಮಾಡಲಾಗಿತ್ತು ಮತ್ತು ಅಮಾನತುಗೊಳಿಸಲಾಯಿತು.

ತಾನು ನಿರಪರಾಧಿ, ಅಮಾಯಕ ಎಂದು ಸಾಬೀತು ಮಾಡಲು ಉಮಾಕಾಂತರಿಗೆ 350 ವಿಚಾರಣೆಗಳು ಮತ್ತು 29 ವರ್ಷಗಳು ಹಿಡಿಯಿತು. ಈ ಅವಧಿಯಲ್ಲಿ ಅವರು ಅನುಭವಿಸಿದ ಕಷ್ಟ, ನಷ್ಟ ಅಪಾರ. ನವೆಂಬರ್ 25ರಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವರನ್ನು ದೋಷಮುಕ್ತಿಗೊಳಿಸಿತು.

ವೆಬ್ದುನಿಯಾವನ್ನು ಓದಿ