ಪದ್ಮನಾಭ ದೇವಾಲಯದಲ್ಲಿ 186 ಕೋಟಿ ಮೌಲ್ಯದ 769 ಚಿನ್ನದ ತಟ್ಟೆಗಳು ನಾಪತ್ತೆ

ಮಂಗಳವಾರ, 16 ಆಗಸ್ಟ್ 2016 (14:16 IST)
ಕೇರಳದ ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭಸ್ವಾಮಿ ದೇವಾಲಯದಲ್ಲಿ 186 ಕೋಟಿ ರೂಪಾಯಿಗಳ ಮೌಲ್ಯದ 769 ಚಿನ್ನದ ತಟ್ಟೆಗಳು ಕಾಣೆಯಾಗಿವೆ ಎಂದು ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಲಾಗಿದೆ.
 
ಸಿಎಜಿ ವಿನೋದ್ ರಾಯ್ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿದ್ದು, 186 ಕೋಟಿ ರೂಪಾಯಿಗಳ ಮೌಲ್ಯದ 769 ಚಿನ್ನದ ತಟ್ಟೆಗಳು ಕಾಣೆಯಾಗಿರುವ ಬಗ್ಗೆ ಸಮಗ್ರ ತನಿಖೆ ಅಗತ್ಯವಾಗಿದೆ ಎಂದು ತಮ್ಮ ವರದಿಯಲ್ಲಿ ದಾಖಲಿಸಿದ್ದಾರೆ. 
 
ಸುಪ್ರೀಂಕೋರ್ಟ್ ಆಕ್ಟೋಬರ್ 2015ರೊಳಗೆ ಪದ್ಮನಾಭ ದೇವಾಲಯದ ಸಂಪೂರ್ಣ ಲೆಕ್ಕಪರಿಶೋಧನಾ ವರದಿಯನ್ನು ನೀಡುವಂತೆ ಸಿಎಜಿ ವಿನೋದ್ ರಾಯ್‌ಗೆ ಕೋರ್ಟ್ ಆದೇಶ ನೀಡಿತ್ತು. 
 
ಚಿನ್ನವನ್ನು ಕರಗಿಸಿ ಪರಿಶುದ್ಧವಾಗಿಸಲು ಕಳೆಹಿಸಲಾದ ಶೇ.30 ರಷ್ಟು ಚಿನ್ನ ಕಳೆದುಹೋಗಿದ್ದು, ಕಳೆದು ಹೋದ ಚಿನ್ನದ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ ಎಂದು ರಾಯ್ ತಿಳಿಸಿದ್ದಾರೆ.
 
14 ಲಕ್ಷ ರೂಪಾಯಿಗಳ ಬೆಲೆಬಾಳುವ ಬೆಳ್ಳಿಯ ಬಾರ್ ಕಾಣೆಯಾಗಿದೆ. ಕೂಡಲೇ ದೇವಾಲಯದ ಭದ್ರತಾ ಸಿಬ್ಬಂದಿಯನ್ನು ಬದಲಿಸಿ, ದೇವಾಲಯದಲ್ಲಿರುವ ಚಿನ್ನದ ಆಭರಣಗಳಿಗಾಗಿ ಆಧುನಿಕ ಮ್ಯೂಸಿಯಂನಲ್ಲಿಟ್ಟು ಭಾರಿ ಭದ್ರತೆ ನೀಡುವ ಅನಿವಾರ್ಯತೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
 
ದೇವಾಲಯದಲ್ಲಿರುವ ಚಿನ್ನದ ಆಭರಣಗಳನ್ನು ರಕ್ಷಿಸಲು ನಿವೃತ್ತ ಎಐಎಸ್ ಅಧಿಕಾರಿಗಳ ಹೊಸ ಸಮಿತಿಯನ್ನು ರಚಿಸುವಂತೆ ಸಿಎಜಿ ವಿನೋದ್ ರಾಯ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ