ನಾಗಾಲ್ಯಾಂಡ್: ಉಗ್ರರ ದಾಳಿಗೆ ಹುತಾತ್ಮರಾದ 8ಜನ ಸೈನಿಕರು

ಸೋಮವಾರ, 4 ಮೇ 2015 (16:39 IST)
ನಾಗಾಲ್ಯಾಂಡ್‌ನಲ್ಲಿ  ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದು ಅರೆಸೇನಾ ಪಡೆ ವಾಹನವೊಂದರ ಮೇಲೆ ಬಾಂಬ್ ದಾಳಿ ನಡೆಸಿ ಅಸ್ಸಾಂ ರೈಫಲ್ಸ್‌ನ 8  ಜನರನ್ನು ಅಮಾನುಷವಾಗಿ ಹತ್ಯೆಗೈದಿದ್ದಾರೆ. ಭಾನುವಾರ ಮಧ್ಯಾಹ್ನ ಘಟನೆ ನಡೆದಿದೆ. ದಾಳಿ ನಡೆಸಿದವರು ಎನ್ಎಸ್‌ಸಿಎನ್ (ಕೆ) ಸಂಘಟನೆಗೆ ಸೇರಿದ ಭಯೋತ್ಪಾದಕರು ಎಂದು ಹೇಳಲಾಗುತ್ತಿದೆ.

ಒಟ್ಟು 18 ಜನರಿದ್ದ ತಂಡದಲ್ಲಿ ನಾಲ್ವರು ಸೈನಿಕರು ಕಾಣೆಯಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ 6 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ  ಎಂದು ಭದ್ರತಾಪಡೆ ಮೂಲಗಳು ತಿಳಿಸಿವೆ.  ಘಟನೆಯಲ್ಲಿ ಒಬ್ಬ ಭಯೋತ್ಪಾದಕ ಸಹ ಸಾವಿಗೀಡಾಗಿದ್ದಾನೆ ಎಂದು ಹೇಳಲಾಗುತ್ತಿದೆ.
 
ನೀರು ತರಲೆಂದು ಹೊರಟಿದ್ದ ಸೈನಿಕರ ವಾಹನದ ಮೇಲೆ ನಾಗಲ್ಯಾಂಡ್‌ ರಾಜ್ಯದ ಚಂಗ್‌ಲಾಂಗ್‌ಸು ಪ್ರದೇಶದ ಕುಗ್ರಾಮವೊಂದರ ಬಾಂಬ್ ಸ್ಫೋಟಿಸಿದ ಉಗ್ರರು ನಂತರ ಗುಂಡಿನ ದಾಳಿಯನ್ನೂ ನಡೆಸಿದರು. ಪರಿಣಾಮ 8 ಜನ ಸೈನಿಕರು ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ. ರವಿವಾರ ಮಧ್ಯಾಹ್ನ 2.30ರ ಸುಮಾರಿಗೆ ಈ ದುಷ್ಕೃತ್ಯವನ್ನೆಸಗಲಾಗಿದೆ.  ಪ್ರತಿದಾಳಿಯಲ್ಲಿ ಒಬ್ಬ ಉಗ್ರ ಸಹ ಹತ್ಯೆಯಾಗಿದ್ದಾನೆ ಎಂದು ತಿಳಿದು ಬಂದಿದೆ.
 
ಎಪ್ರಿಲ್ 2 ರಂದು ಎನ್ಎಸ್‌ಸಿಎನ್ (ಕೆ) ಉಗ್ರರು ಅರುಣಾಚಲಪ್ರದೇಶದ ತಿರಾಪ್ ಜಿಲ್ಲೆಯಲ್ಲಿ ನಡೆಸಿದ್ದ ದಾಳಿಯಲ್ಲಿ 3 ಜನ ಸೈನಿಕರು ಮೃತಪಟ್ಟು ಮತ್ತೆ ಮೂರು ಜನರು ಗಾಯಗೊಂಡಿದ್ದರು.

ವೆಬ್ದುನಿಯಾವನ್ನು ಓದಿ