ದೇವಾಲಯ ಪ್ರವೇಶಿಸಲು ಯತ್ನಿಸಿದ 90 ವರ್ಷದ ದಲಿತ ವ್ಯಕ್ತಿಯ ಜೀವಂತ ದಹನ

ಶನಿವಾರ, 3 ಅಕ್ಟೋಬರ್ 2015 (15:53 IST)
ದೇವಾಲಯ ಪ್ರವೇಶಿಸಲು ಯತ್ನಿಸಿದ 90 ವರ್ಷ ವಯಸ್ಸಿನ ದಲಿತ ವ್ಯಕ್ತಿಯೊಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಜೀವಂತವಾಗಿ ದಹಿಸಿದ ಘಟನೆ ವರದಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಹತ್ಯೆಗೊಳಗಾದ ವ್ಯಕ್ತಿ ಚಿಮ್ಮಾ ಎಂಬಾತ ಮೈದಾನಿ ಬಾಬಾ ದೇವಾಲಯಕ್ಕೆ ಪತ್ನಿ ಮತ್ತು ಪುತ್ರ ದುರ್ಜನ್ ಹಾಗೂ ಸಹೋದರನೊಂದಿಗೆ ತೆರಳಿದ್ದಾಗ ದೇವಾಲಯ ಪ್ರವೇಶಿಸದಂತೆ ಸಂಜಯ್ ತಿವಾರಿ ಎನ್ನುವ ವ್ಯಕ್ತಿ ತಡೆದಿದ್ದಾನೆ ಎನ್ನಲಾಗಿದೆ.
 
ಆದರೆ, ಸಂಜಯ್ ತಿವಾರಿ ಮಾತನ್ನು ಕೇಳದೆ ಚಿಮ್ಮಾ ದೇವಾಲಯ ಪ್ರವೇಶಿಸಿದಾಗ, ಆಕ್ರೋಶಗೊಂಡ ತಿವಾರಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಲ್ಲದೇ ಬೆಂಕಿ ಹಚ್ಚಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಕಾನ್ಪುರ್‌ದಿಂದ 140 ಕಿ.ಮೀ ದೂರದಲ್ಲಿರುವ ಹಮೀರ್ಪುರ್ ಮತ್ತು ಜಲೌನ್ ಜಿಲ್ಲೆಯ ಗಡಿಯಲ್ಲಿರುವ ಬಿಲ್‌ಗಾಂವ್‌ನಲ್ಲಿರುವ ದೇವಾಲಯದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿಯೇ ಘಟನೆ ನಡೆದಿದ್ದರಿಂದ ಜನರು ತಿವಾರಿಯನ್ನು ಹಿಡಿದು ಪೊಲೀಸ್ ವಶಕ್ಕೆ ನೀಡಿದ್ದಾರೆ.
 
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ತಿವಾರಿ, ಚಿಮ್ಮಾ ಮತ್ತು ಆತನ ಪರಿವಾರದ ಸದಸ್ಯರಿಗೆ ದೇವಾಲಯ ಪ್ರವೇಶಸಿದಂತೆ ಎಚ್ಚರಿಕೆ ನೀಡಿದ್ದನು. ಆದರೆ, ಚಿಮ್ಮಾ ಪರಿವಾರ ಆತನ ಎಚ್ಚರಿಕೆಯನ್ನು ನಿರ್ಲಕ್ಷಿಸಿ ದೇವಾಲಯ ಪ್ರವೇಶಿಸಿದ್ದರಿಂದ ಘಟನೆ ನಡೆದಿದೆ ಎನ್ನಲಾಗಿದೆ. 
 
ಘಟನೆ ನಡೆದಾಗ ಆರೋಪಿ ತಿವಾರಿ ಕುಡಿದ ಮತ್ತಿನಲ್ಲಿದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ