ಶಿಕ್ಷಕ ಬೈದಿದ್ದರಿಂದ ಮನನೊಂದ ಬಾಲಕ 4ನೇ ಮಹಡಿಯಿಂದ ಜಂಪ್ ಮಾಡಿದ!

ಬುಧವಾರ, 25 ಫೆಬ್ರವರಿ 2015 (10:01 IST)
ಮುಂಬೈ ಬಳಿ ಶಾಲೆಯ ಶಿಕ್ಷಕ ಬೈದಿದ್ದರಿಂದ ಮನನೊಂದ 12 ವರ್ಷದ ಬಾಲಕನೊಬ್ಬ ಶಾಲೆಯ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿ ಮೃತಪಟ್ಟ ಹೃದಯವಿದ್ರಾವಕ ಘಟನೆ ಸಂಭವಿಸಿದೆ.

ಗೌರವ್ ಕಾಂಕ್ 6ನೇ ತರಗತಿ ವಿದ್ಯಾರ್ಥಿಯಾಗಿದ್ದು, ನವಿ ಮುಂಬೈನ  ನ್ಯೂ ಹಾರಿಜಾನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ.  ಅವನಿಗೆ ಮಂಗಳವಾರ ಬೆಳಿಗ್ಗೆ ವಿಜ್ಞಾನ ಶಿಕ್ಷಕರು ಬಾಲಕನ ದುರ್ನಡತೆಗಾಗಿ ಬೈದಿದ್ದರಿಂದ ಬಾಲಕ ಮನನೊಂದಿದ್ದ.ಗೌರವ್ ಶಾಲೆಯ ಕೋಣೆಯ ಕಿಟಕಿಯನ್ನು ತೆರೆದು ಅಲ್ಲಿಂದ ಕೆಳಕ್ಕೆ ಜಂಪ್ ಮಾಡಿದ್ದಾನೆಂದು ಹೇಳಲಾಗುತ್ತಿದೆ. ಮಕ್ಕಳ ಸುರಕ್ಷತೆಗೆ ಗಮನಹರಿಸದಿರುವ ಶಾಲೆಯ ವಿರುದ್ಧ ಪೋಷಕರ ಗುಂಪೊಂದು ಪ್ರತಿಭಟನೆ ನಡೆಸಿದೆ.

ಶಾಲೆಯ ಆಡಳಿತವರ್ಗ ಈ ಘಟನೆಗೆ ಹೊಣೆಯಾಗಿದೆ. ಶಾಲೆಯ ತರಗತಿಗಳ ಕಿಟಕಿಗಳಲ್ಲಿ ಕಂಬಿಗಳನ್ನು ಹಾಕಿಲ್ಲ ಎಂದು ಪೋಷಕರೊಬ್ಬರು ದೂರಿದ್ದಾರೆ. ಆದರೆ ಶಾಲೆಯ ಪ್ರಾಂಶುಪಾಲರು ಮಾತ್ರ ಇದು ಶಾಲೆಯ ನಿರ್ಲಕ್ಷ್ಯ ಹೇಗಾಗುತ್ತದೆಂದು ಪ್ರಶ್ನಿಸಿದ್ದಾರೆ. ಇದು ಏಕಾಯಿತು ಎಂಬ ಬಗ್ಗೆ ಪತ್ತೆಹಚ್ಚುತ್ತಿದ್ದೇವೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಪ್ರಾಂಶುಪಾಲೆ ರೇಣುಕಾ ಬಾಲಾಜಿ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ