ಕಾಳಜಿಯುಳ್ಳ ತಾಯಿ ಕೆಲವೊಮ್ಮೆ ಕಠಿಣವಾಗಬೇಕಾಗುತ್ತದೆ: ಸುಮಿತ್ರಾ ಮಹಾಜನ್

ಬುಧವಾರ, 5 ಆಗಸ್ಟ್ 2015 (11:02 IST)
ಕಾಂಗ್ರೆಸ್‌ನ 25 ಸಂಸದರನ್ನು 5 ದಿನಗಳ ಕಾಲ ಅಮಾನತು ಮಾಡಿದ ತಮ್ಮ ನಡೆಯ ಕುರಿತು ಮಾತನಾಡಿರುವ ಲೋಕಸಭಾ ಸಭಾಪತಿ ಸುಮಿತ್ರಾ ಮಹಾಜನ್  ತನ್ನ ಮಕ್ಕಳ ಬಗ್ಗೆ ಕಾಳಜಿಯುಳ್ಳ ತಾಯಿ ಮಕ್ಕಳನ್ನು ನಿಯಂತ್ರಿಸಲು ಕೆಲವೊಮ್ಮೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. 

ಬಿಜೆಪಿ ಸಂಸದ ಹುಕುಮದೇವ್ ನಾರಾಯಣ್‌ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಮಹಾಜನ್, "ಎಲ್ಲರೂ ನನ್ನನ್ನು ಸೌಮ್ಯ ಸ್ವಭಾವದವರು ಎನ್ನುತ್ತಿದ್ದರು. ಆದರೆ ಕೆಲವರು ಇನ್ನು ಮುಂದೆ ನನ್ನನ್ನು ಸೌಮ್ಯ ಸ್ವಭಾವದವಳು ಎನ್ನದಿರಬಹುದು. ಆದರೆ ನಾನು ಸೌಮ್ಯ ಸ್ವಭಾವದವಳೇ ಆಗಿದ್ದೇನೆ. ಮಕ್ಕಳ ಬಗ್ಗೆ ಕಾಳಜಿಯುಳ್ಳ ತಾಯಿ ಮಕ್ಕಳನ್ನು ತಹಬಂದಿಗೆ ತರಲು ಕೆಲವೊಮ್ಮೆ ಕಠಿಣಳಾಗಬೇಕಾಗುತ್ತದೆ", ಎಂದು ಲೋಕಸಭೆ ಅಮಾನತು ವಿಚಾರದ ಕುರಿತು ಪ್ರಸ್ತಾಪಿಸದೆ ಈ ರೀತಿ ಹೇಳಿದ್ದಾರೆ.  
 
ಕೇಂದ್ರ ಸಚಿವ ರಾಜನಾಥ್ ಸಿಂಗ್ ಕೂಡ ಸಭೆಯಲ್ಲಿ ಹಾಜರಿದ್ದರು. 
 
ಸೋಮವಾರ ಸಂಸತ್ ಅಧಿವೇಶನದ ಸಂದರ್ಭದಲ್ಲಿ ಪದೇ ಪದೇ ಸದನದ ಬಾವಿಗಿಳಿದು ಪ್ರತಿಭಟಿಸುತ್ತಿದ್ದ, ನಿಯಮ ಬಾಹಿರವಾಗಿ ಸದನಕ್ಕೆ ಪ್ಲೇ ಕಾರ್ಡ್ಸ್ ತರುತ್ತಿದ್ದ ಆರೋಪಗ ಮೇಲ ಸಂಸತ್ತಿನಲ್ಲಿ ಕಾಂಗ್ರೆಸ್‌ನ 25 ಸಂಸದರನ್ನು 5 ದಿನಗಳ ಮಟ್ಟಿಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಅಮಾನತು ಮಾಡಿದ್ದರು. ಇದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಕಲಾಪವನ್ನು ಬಹಿಷ್ಕರಿಸಿತ್ತು. ಜತೆಗೆ ಸಂಸತ್ತಿನ ಹೊರಗಿರುವ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆಯನ್ನು ಕೈಗೊಂಡಿತ್ತು. ಉಳಿದ ವಿರೋಧ ಪಕ್ಷಗಳು ಸಹ ಕಾಂಗ್ರೆಸ್‌ಗೆ ಬೆಂಬಲವನ್ನು ಸೂಚಿಸಿದ್ದವು.
 
ಮಹಾಜನ್ ಇಂದು 25 ಕಾಂಗ್ರೆಸ್ ಸದಸ್ಯರ ಅಮಾನತ್ತನ್ನು ನಾಳೆ ತೆರುವುಗೊಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ