ದೆಹಲಿ ಏರ್‌ಪೋರ್ಟ್‌‍ನಲ್ಲಿ ಹುಸಿ ಬಾಂಬ್ ಕರೆಗಳಿಂದ ಹೈರಾಣಾದ ಅಧಿಕಾರಿಗಳು

ಮಂಗಳವಾರ, 29 ಮಾರ್ಚ್ 2016 (02:56 IST)
ಕಳೆದ ಒಂದು ವಾರದಲ್ಲಿ ದೆಹಲಿ ವಿಮಾನ ನಿಲ್ದಾಣದಲ್ಲಿ ಹುಸಿ ಬಾಂಬ್ ಬೆದರಿಕೆ ಕರೆಗಳ ಹಾವಳಿಯಿಂದ ಅಧಿಕಾರಿಗಳು ಹೈರಾಣಾಗಿದ್ದಾರೆ. ಇಂದಿರಾ ಗಾಂಧಿ ವಿಮಾನನಿಲ್ದಾಣಕ್ಕೆ ಸುಮಾರು 62 ಬಾಂಬ್ ಬೆದರಿಕೆ ಕರೆಗಳು ಬಂದಿದ್ದು, ಅವುಗಳ ಪೈಕಿ ಒಂದೇ ದಿನದಲ್ಲಿ 44 ಕರೆಗಳನ್ನು ಸ್ವೀಕರಿಸಿದೆ. 
 
 ಇಂತಹ ಬೆದರಿಕೆ ಕರೆಗಳಿಂದ ಸಂಪೂರ್ಣ ಭದ್ರತಾ ವ್ಯವಸ್ಥೆಯನ್ನೇ ಹಳಿ ತಪ್ಪಿಸಿದ್ದು, ಏರ್‌ಲೈನ್ಸ್ ಬೊಕ್ಕಸಕ್ಕೆ ಭಾರಿ ವೆಚ್ಚವನ್ನು ಉಂಟುಮಾಡಿದೆ. ಇದಲ್ಲದೇ ಪ್ರಯಾಣಿಕರಿಗೆ ಕೂಡ ದುಃಸ್ವಪ್ನದ ಅನುಭವ ನೀಡಿದೆ. ಆದರೆ ಹುಸಿ ಕರೆ ಮಾಡಿದವರನ್ನು ಬಂಧಿಸುವ ಪ್ರಕರಣಗಳು ಮಾತ್ರ ತೀರಾ ಕಡಿಮೆ.
 
 ಈ ಬಾಂಬ್ ಬೆದರಿಕೆ ಕರೆಗಳಿಂದಾಗಿ ಏರ್‌ಲೈನ್ಸ್ ಕೋಟ್ಯಂತರ ರೂ. ನಷ್ಟ ಅನುಭವಿಸಿದೆ. ಬೆದರಿಕೆ ಕರೆ ಬಂದ ಕೂಡಲೇ ಬಾಂಬ್ ಬೆದರಿಕೆ ಅಂದಾಜು ಸಮಿತಿ ಹೆಜ್ಜೆಯಿರಿಸಿ ವಿಮಾನವನ್ನು ನಿರ್ಜನ ಸ್ಥಳಕ್ಕೆ ಒಯ್ಯಲಾಗುತ್ತದೆ. ವಿಧ್ವಂಸಕಾರಿ ನಿಗ್ರಹ ಕವಾಯಿತು, ಬ್ಯಾಗೇಜ್ ಮತ್ತು ಸರಕು ಮರುಪರಿಶೀಲನೆ ಮತ್ತು ಪ್ರಯಾಣಿಕರನ್ನು ಮರುತಪಾಸಣೆಗೆ ಒಳಪಡಿಸಲಾಗುತ್ತದೆ.
 
 ವಿಮಾನವು ಆಕಾಶದಲ್ಲಿ ಹಾರುತ್ತಿದ್ದರೆ ಸ್ಥಳಾಂತರ ಮಾಡುವುದರಿಂದ ಉಂಟಾಗುವ ಇಂಧನ ವೆಚ್ಚವು ಗಂಟೆಗೆ 3-4 ಲಕ್ಷ ರೂ. ಖರ್ಚಾಗುತ್ತದೆ. ನಾಲ್ಕು ಗಂಟೆಗಿಂತ ಹೆಚ್ಚು ವಿಳಂಬವಾದರೆ ಹೊಸ ಸಿಬ್ಬಂದಿಯನ್ನು ಕರೆತಂದು ಪ್ರಯಾಣಿಕರಿಗೆ ಹೊಟೆಲ್‌ಗಳಲ್ಲಿ ಆಶ್ರಯ ಕಲ್ಪಿಸಬೇಕು.

ವೆಬ್ದುನಿಯಾವನ್ನು ಓದಿ