ದೆಹಲಿ ಲೋಕಾಯುಕ್ತ ಹುದ್ದೆ ಆಫರ್ ತಿರಸ್ಕರಿಸಿದ ಎ.ಪಿ.ಶಾಹ್ : ಕೇಜ್ರಿವಾಲ್ ನಿರಾಸೆ

ಶುಕ್ರವಾರ, 21 ಆಗಸ್ಟ್ 2015 (21:45 IST)
ಕಳೆದ 2013ರಿಂದ ನೆನೆಗುದಿಗೆ ಬಿದ್ದಿರುವ ಲೋಕಾಯುಕ್ತರ ಹುದ್ದೆಯನ್ನು ಅಲಂಕರಿಸುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರದ ಪ್ರಸ್ತಾವನೆಯನ್ನು ಕಾನೂನು ಆಯೋಗದ ಮುಖ್ಯಸ್ಥ ಎ.ಪಿ.ಶಾಹ ತಿರಸ್ಕರಿಸಿದ್ದಾರೆ.
 
ದೆಹಲಿ ಹೈಕೋರ್ಟ್‌ನ ಮಾಜಿ ಮುಖ್ಯನ್ಯಾಯಮೂರ್ತಿಯಾಗಿದ್ದ ಶಾ ಮಾತನಾಡಿ, ನಾನು ದೆಹಲಿ ಸರಕಾರದ ಆಫರ್ ತಿರಸ್ಕರಿಸಿದ್ದೇನೆ ಎಂದು ಹೇಳಿದ್ದಾರೆ.  ಕೇಜ್ರಿವಾಲ್ ಸರಕಾರ ಶಾಹ್ ಲೋಕಾಯುಕ್ತರಾಗುವಂತೆ ಒತ್ತಡ ಹೇರಿತ್ತು ಎನ್ನಲಾಗಿದೆ.
 
20ನೇ ಕಾನೂನು ಆಯೋಗದ ಮುಖ್ಯಸ್ಥ ಶಾ ಅವಧಿ ಆಗಸ್ಟ್ 31 ಕ್ಕೆ ಅಂತ್ಯಗೊಳ್ಳಲಿದೆ. ಆದರೆ, ಮುಂದಿನ ನಡೆ ಬಗ್ಗೆ ಸದ್ಯಕ್ಕೆ ಉತ್ತರಿಸಲಾರೆ ಎಂದು ಶಾ ಸ್ಪಷ್ಟಪಡಿಸಿದ್ದಾರೆ.
 
ದೆಹಲಿಯ ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಕಾಯ್ದೆ ಪ್ರಕಾರ, ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮತ್ತು ವಿಧಾನಸಭೆಯ ವಿಪಕ್ಷ ನಾಯಕರನ್ನು ಸಂಪರ್ಕಿಸಿದ ನಂತರ ಲೋಕಾಯುಕ್ತರನ್ನು ನೇಮಕ ಮಾಡಲಾಗುತ್ತದೆ.  
 
ಪ್ರಸ್ತುತ ವ್ಯವಸ್ಥೆಯಲ್ಲಿ ಲೋಕಾಯುಕ್ತರಿಗೆ ಭ್ರಷ್ಟಾಚಾರ ನಿಗ್ರಹ ಸಂದರ್ಭದಲ್ಲಿ ಅಲ್ಪ ಅಧಿಕಾರದ ಮಿತಿಯನ್ನು ನೀಡಲಾಗಿದೆ. ದೆಹಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತಂದು ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿರಲಿ ಎನ್ನುವುದು ಜನತೆಯ ಬೇಡಿಕೆಯಾಗಿದೆ.  

ವೆಬ್ದುನಿಯಾವನ್ನು ಓದಿ