ಮೊಘಲ್ ಕಾಲದ ಚಿನ್ನದ ನಾಣ್ಯ ಪತ್ತೆ ಹಚ್ಚಿದ ಕುರಿಕಾಯುವ ಹುಡುಗಿ

ಶನಿವಾರ, 23 ಆಗಸ್ಟ್ 2014 (19:00 IST)
ಉತ್ಖನನ ನಡೆಸಿದ್ದ ಸರ್ಕಾರಿ ಸಂಸ್ಥೆಗಳು ಏನನ್ನು ಕೂಡ ಪತ್ತೆ ಹಚ್ಚಲು ವಿಫಲವಾಗಿದ್ದ ಸ್ಥಳದಲ್ಲಿ,  16 ವರ್ಷದ ಕುರಿಕಾಯುವ ಹುಡುಗಿ ಶಿವಕುಮಾರಿ (ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಟಂಡನ್ ಖೇರಾ ಗ್ರಾಮ) 'ಚಿನ್ನದ ನಾಣ್ಯ' ಗಳನ್ನು ಪತ್ತೆ ಹಚ್ಚಿದ್ದಾಳೆ. 

ಕಳೆದ ವರ್ಷ, ಸ್ಥಳೀಯ ಭವಿಷ್ಯಗಾರರೊಬ್ಬರು ದಂಡಿಯಾ ಖೇರಾದ ಹಳೆಯ ಕೋಟೆಯ ಅವಶೇಷಗಳ ಅಡಿಯಲ್ಲಿ  1,000 ಟನ್ ಚಿನ್ನವಿದೆ ಎಂದು ಕನಸು ಕಂಡಿದ್ದರು. 
 
ರಾಷ್ಟ್ರೀಯ ದೈನಿಕವೊಂದರಲ್ಲಿ ಪ್ರಕಟವಾದ  ಸುದ್ದಿಯ ಪ್ರಕಾರ  ತನ್ನ ಕುರಿಗಳನ್ನು ಮೇಯಿಸಿಕೊಂಡು ಹೋಗುತ್ತಿದ್ದ ಹುಡುಗಿ ಶಿವಕುಮಾರಿಗೆ,  ತನ್ನ ಕಾಲ ಬಳಿ ಹೊಳೆಯುವ ವಸ್ತುವೊಂದು ಬಡಿದಿದೆ.  ಕುತೂಹಲಗೊಂಡ ಹುಡುಗಿ ಆ ಜಾಗವನ್ನು ಕೆದಕಿದಾಗ ಅವಳಿಗೆ ಬಟ್ಟೆಯಿಂದ ಸುತ್ತಲ್ಪಟ್ಟ ಗಡಿಗೆ ಕಂಡುಬಂದಿದೆ. ಅದನ್ನು ಎಳೆಯಲು ಪ್ರಯತ್ನ ಪಟ್ಟ ಅವಳಿಗೆ  ನಾಣ್ಯ ಖಣ ಖಣಿಸುವ  ಶಬ್ಧ ಕೇಳಿದೆ.  ಕುತೂಹಲ ತಣಿಯದೇ  ಆ ಗಂಟು ಬಿಚ್ಚಿ ನೋಡಿದಾಗ  ಕೆಲವು ನಾಣ್ಯಗಳು ಕಂಡುಬಂದವು. 
 
ನಿಧಿ ಪತ್ತೆಯಾಗುತ್ತಿದ್ದಂತೆ ರಸ್ತೆಯಲ್ಲಿ ಹೋಗುತ್ತಿದ್ದವರ ನಡುವೆ ಜಗಳ ಪ್ರಾರಂಭವಾಗಿದೆ. ಆ ಜಗಳಕ್ಕೆ ಪ್ರತ್ಯಕ್ಷ ಸಾಕ್ಷಿಗಳಾದ ಕೆಲವರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತಲುಪಿದ ಪೋಲಿಸರು ನಾಣ್ಯವಿದ್ದ ಗಡಿಗೆಯನ್ನು ವಶಪಡಿಸಿಕೊಂಡಿದ್ದಾರೆ. 
 
ಗಡಿಗೆಯಲ್ಲಿ ಅರೇಬಿಕ್ ಲಿಪಿಯುಳ್ಳ 6 ಚಿನ್ನದ ನಾಣ್ಯಗಳು ಕಂಡುಬಂದಿವೆ. ಆ ಲಿಪಿಯನ್ನು ಓದಲು  ಒಬ್ಬ ಮೌಲಾನಾನನ್ನು  ಕರೆಸಿದ ಪೋಲಿಸರಿಗೆ ಆತ ಇದು ಮೊಘಲ್ ಕಾಲದ ನಾಣ್ಯಗಳೆಂದು ತಿಳಿಸಿದ್ದಾನೆ. 
 
ಈ ಕುರಿತು ಭಾರತೀಯ  ಪುರಾತತ್ವ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ಹನ್ಸಗಂಜ್ ಎಸ್ಡಿಎಂ  ಕುಮಾರಿ ಶೆರ್ರಿ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ