ನನ್ನ ದೇಶಭಕ್ತಿಯನ್ನು ಹೇಗೆ ಸಾಬೀತು ಪಡಿಸಲಿ ಎಂದು ಕಣ್ಣೀರಿಟ್ಟ ಸಾನಿಯಾ ಮಿರ್ಜಾ

ಶನಿವಾರ, 26 ಜುಲೈ 2014 (11:51 IST)
ತಮ್ಮನ್ನು ತೆಲಂಗಾಣದ ರಾಯಭಾರಿಯನ್ನಾಗಿಸಿದುದರ ಸುತ್ತ ಎದ್ದಿರುವ ವಿವಾದದಿಂದ ನೊಂದಿರುವ ಖ್ಯಾತ ಟೆನ್ನಿಸ್ ಆಟಗಾರ್ತಿ ಸುದ್ದಿ ವಾಹಿನಿಗೆ ಸಂದರ್ಶನ ನೀಡುತ್ತಿದ್ದ ವೇಳೆ ತಮ್ಮ ಮನದಲ್ಲಿನ ನೋವನ್ನು ತಡೆಯಲಾರದೆ ಕಣ್ಣೀರಿಟ್ಟರು. 

ಸಾನಿಯಾ ಸ್ಥಳೀಯರು ಅಲ್ಲ ಮತ್ತು ಪಾಕಿಸ್ತಾನದ ಸೊಸೆ. ಅವರನ್ನು ಯಾವ ಆಧಾರದ ಮೇಲೆ ತೆಲಂಗಾಣದ ರಾಯಭಾರಿಯನ್ನಾಗಿಸಿದಿರಿ ಎಂದು ಬಿಜೆಪಿ ನಾಯಕ ಕೆ. ಲಕ್ಷ್ಮಣ್ ತಗಾದೆ ತೆಗೆದಿರುವುದಕ್ಕೆ ಅಪಾರ ನೊಂದಿರುವ ಸಾನಿಯಾ "ನಿನ್ನೆ ನಾನು ತುಂಬಾ ನೋವನ್ನು ಅನುಭವಿಸಿದೆ. ನಾನು  ಭಾರತೀಯತೆಯನ್ನು ನಾನು ಎಷ್ಟು ಬಾರಿ ಸಮರ್ಥಿಸಿಕೊಳ್ಳಬೇಕು, ನನ್ನ ದೇಶಭಕ್ತಿಯನ್ನು ನಾನು ಹೇಗೆ ಸಾಬೀತು ಪಡಿಸಬೇಕು" ಎಂದು ಹೇಳುತ್ತಿದ್ದಂತೆ ಉಮ್ಮಳಿಸಿ ಬಂದ ಕಂಬನಿಯನ್ನು ತಡೆಯದಾದರು. 
 
"ಇದೊಂದು ಭಯಾನಕ ವಿಷಯ. ನಾನು ಹೆಣ್ಣು ಎಂಬ ಕಾರಣಕ್ಕೆ ಮತ್ತು ನಾನು ಬೇರೆ ದೇಶದ ವ್ಯಕ್ತಿಯನ್ನು ಮದುವೆಯಾದೆ ಎಂಬ ಕಾರಣಕ್ಕೆ ಇವೆಲ್ಲ ನಡೆಯುತ್ತಿದೆ.  ಇದೆಲ್ಲ ನನ್ನ ಜತೆಯೇ ಏಕೆ ನಡೆಯುತ್ತಿದೆ. ಮದುವೆಯಾದ ನಂತರ ಕೂಡ ನಾನು ಭಾರತಕ್ಕೆ ಪದಕಗಳನ್ನು ಗೆದ್ದು ತಂದಿದ್ದೇನೆ. ನನ್ನ ಹಾದಿಯನ್ನು ಬಹಳಷ್ಟು ಜನ ಪ್ರಶ್ನಿಸಿದ್ದರು. ಆದರೆ ನಾನು ಯಾವುದನ್ನು ತಲೆಗೆ ಹಚ್ಚಿಕೊಳ್ಳಲಿಲ್ಲ.  ನಾನು ಆಟವಾಡ ಬೇಕಾದರೆ ತೆಲಂಗಾಣ ಮತ್ತು ಭಾರತವನ್ನು ಪ್ರತಿನಿಧಿಸುತ್ತಿದ್ದೇನೆ ಮತ್ತು ಅದನ್ನೇ ಮುಂದುವರೆಸುತ್ತೇನೆ. ನಾನು  ಸಾಯುವವರೆಗೂ ಭಾರತೀಯಳಾಗಿರುತ್ತೇನೆ" ಎಂದು ಸಾನಿಯಾ ಹೇಳಿದರು.
 
"ದೇಶಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗಳಿಸಿದ ನಂತರವೂ  ನನ್ನ ಭಾರತೀಯತೆಯನ್ನು  ಸಾಬೀತು ಪಡಿಸಬೇಕಾಗಿರುವುದು ತುಂಬ ಅನ್ಯಾಯ .ನಾನು ಪಾಕಿಸ್ತಾನಿ ಪ್ರಜೆ ಶೋಹೆಬ್ ಮಲ್ಲಿಕ್‌ರವರನ್ನು ಮದುವೆಯಾಗಿರ ಬಹುದು. ಆದರೆ ನಾನು ಭಾರತೀಯಳು ಮತ್ತು  ಸಾಯುವವರೆಗೂ ಭಾರತೀಯಳಾಗಿ ಇರುತ್ತೇನೆ" ಎಂದು ಸಾನಿಯಾ ಹೇಳಿಕೆ ನೀಡಿದ್ದಾರೆ. 
 
ಟೆನ್ನಿಸ್ ಆಟಗಾರ್ತಿ ಸಾನಿಯರವರನ್ನು ರಾಜ್ಯದ ರಾಯಭಾರಿಯಾಗಿ ಘೋಷಿಸಿದ್ದಲ್ಲದೇ ಅವರಿಗೆ ಒಂದು ಕೋಟಿ ರೂಪಾಯಿ ಹಣ ನೀಡಿದ್ದ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್  ಸಾನಿಯಾ ಹೈದರಾಬಾದಿನ ಮಗಳು ಎಂದು ಬಣ್ಣಿಸಿದ್ದರು.  
 
ಟಿಆರ್‌ಎಸ್ ಸರಕಾರದ ಈ ಕ್ರಮದ  ವಿರುದ್ಧ  ಕಿಡಿಕಾರಿದ್ದ ಬಿಜೆಪಿ ನಾಯಕ ಕೆ ಲಕ್ಷ್ಮಣ್ ಪಾಕಿಸ್ತಾನದ ಸೊಸೆಯಾಗಿರುವ ಅವರು ತಮಗೆ ನೀಡಿರುವ ಗೌರವಕ್ಕೆ ಬದ್ಧರಾಗಿರುತ್ತಾರೆಯೇ ಎಂದು ಪ್ರಶ್ನಿಸಿದ್ದರು. ಅಲ್ಲದೇ ಮಹಾರಾಷ್ಟ್ರದಲ್ಲಿ  ಹುಟ್ಟಿದ್ದ ಸಾನಿಯಾ ನಂತರ ಹೈದರಾಬಾದಿಗೆ ಬಂದು ನೆಲೆಸಿದ್ದರು. ಆದ್ದರಿಂದ ಅವರು ಸ್ಥಳೀಯರೆನಿಸುವುದಿಲ್ಲ. ಈಗ ಪಾಕಿಸ್ತಾನದ ಕ್ರಿಕೆಟಿಗ ಶೊಯೆಬ್ ಮಲ್ಲಿಕ್‌ನನ್ನು ಮದುವೆಯಾಗಿರುವ ಅವರು ಪಾಕಿಸ್ತಾನದ ಸೊಸೆಯಾಗಿದ್ದಾರೆ. ಯಾವ ನೆಲಗಟ್ಟಿನ ಮೇಲೆ ಅವರನ್ನು ತೆಲಂಗಾಣದ ರಾಯಭಾರಿಯನ್ನಾಗಿಸಲಾಗಿದೆ ಎಂದು ಕಿಡಿಕಾರಿದ್ದರು. 

ವೆಬ್ದುನಿಯಾವನ್ನು ಓದಿ