ಪ್ರಧಾನಿ ಮೋದಿ ಬಟ್ಟೆ ವೆಚ್ಚಕ್ಕಿಂತ ಆಪ್ ಜಾಹೀರಾತು ವೆಚ್ಚ ಕಡಿಮೆ: ಅರವಿಂದ್ ಕೇಜ್ರಿವಾಲ್

ಗುರುವಾರ, 30 ಜೂನ್ 2016 (19:00 IST)
ಕಳೆದ ಎರಡು ವರ್ಷಗಳಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಬಟ್ಟೆಗಾಗಿ ಮಾಡಿದ ವೆಚ್ಚಕ್ಕಿಂತ ಆಪ್ ಸರಕಾರ ಜಾಹೀರಾತಿಗಾಗಿ ಮಾಡಿದ ವೆಚ್ಚ ಕಡಿಮೆಯಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
 
ಪ್ರಧಾನಿ ಮೋದಿಯ ಪ್ರತಿಯೊಂದು ಡ್ರೆಸ್ 2 ಲಕ್ಷ ರೂಪಾಯಿ ಬೆಲೆಬಾಳುವುದಾಗಿದ್ದು, ಒಂದು ಬಾರಿ ತೊಟ್ಟ ಡ್ರೆಸ್ ಮತ್ತೊಮ್ಮೆ ತೊಡುವುದಿಲ್ಲ ಎಂದು ಆರೋಪಿಸಿದ್ದಾರೆ.
 
ಆಪ್ ಸರಕಾರ 526 ಕೋಟಿ ರೂಪಾಯಿಗಳ ಜಾಹೀರಾತು ನೀಡಿದೆ ಎಂದು ವಿಪಕ್ಷಗಳು ಆರೋಪಿಸುತ್ತಿರುವುದು ಸಂಪೂರ್ಣ ಸುಳ್ಳು. ಆಪ್ ಸರಕಾರ ಜಾಹೀರಾತಿಗಾಗಿ 76 ಕೋಟಿ ರೂಪಾಯಿಗಳನ್ನು ಮಾತ್ರ ವೆಚ್ಚ ಮಾಡಿದೆ. ದೆಹಲಿ ಸರಕಾರ ಎಲ್ಲಾ ಇಲಾಖೆಗಳ ಜಾಹೀರಾತು ವೆಚ್ಚ ಮೋದಿ ಡ್ರೆಸ್‌ಗಳಿಗಿಂತ ಕಡಿಮೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
 
ನಾನು ಮೋದಿಯವರ ಪ್ರತಿಯೊಂದು ಡ್ರೆಸ್ ಬಗ್ಗೆ ಲೆಕ್ಕ ಕೊಡುತ್ತೇನೆ. ಅವರ ಒಂದು ಡ್ರೆಸ್ 2 ಲಕ್ಷ ರೂಪಾಯಿಗಳದ್ದಾಗಿದೆ. ಅವರು ಪ್ರತಿನಿತ್ಯ ಐದು ಬಾರಿ ಡ್ರೆಸ್ ಬದಲಾಯಿಸುತ್ತಾರೆ. ಅದಂರೆ ಪ್ರತಿದಿನ 10 ಲಕ್ಷ ರೂಪಾಯಿಗಳ ಡ್ರೆಸ್ ತೊಡುತ್ತಾರೆ. ಅವರು ಒಮ್ಮೆ ಧರಿಸಿದ ಬಟ್ಟೆಯನ್ನು ಒಗೆದು ಮತ್ತೆ ಹಾಕಿಕೊಳ್ಳುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.   
 
ಗೂಗಲ್‌ಗೆ ಹೋಗಿ ಮೋದಿ ಎಂದು ಟೈಪ್ ಮಾಡಿ. ಮೋದಿ ಭಾವಚಿತ್ರಗಳು ಕಂಡುಬರುತ್ತವೆ. ಯಾವುದೇ ಚಿತ್ರದಲ್ಲಿ ಒಂದು ಬಾರಿ ಹಾಕಿದ ಡ್ರೆಸ್ ಮತ್ತೊಂದು ಬಾರಿ ಕಾಣಿಸುವುದಿಲ್ಲ. ಅದರರ್ಥ 700 ದಿನಗಳ ಅಧಿಕಾರವಧಿಯಲ್ಲಿ 70 ಕೋಟಿ ರೂಪಾಯಿಗಳನ್ನು ಕೇವಲ ಬಟ್ಟೆಗಾಗಿ ಖರ್ಚು ಮಾಡಿದ್ದಾರೆ. ಇತರ ಐದು ಕೋಟಿ ರೂಪಾಯಿಗಳನ್ನು ಬೇರೆ ಬೇರೆ ಬಟ್ಟೆಗಳಿಗಾಗಿ ವೆಚ್ಚ ಮಾಡಿದ್ದಾರೆ.
 
ಪ್ರಧಾನಮಂತ್ರಿ ನರೇಂದ್ರ ಮೋದಿ ಎರಡು ವರ್ಷಗಳನ್ನು ಪೂರ್ತಿಗೊಳಿಸಿದ ಅಂಗವಾಗಿ ಆಯೋಜಿಸಿದ ಐದು ಗಂಟೆಗಳ ಕಾರ್ಯಕ್ರಮವನ್ನು ಬಹುತೇಕ ಮಾಧ್ಯಮಗಳು ನಿರಂತರವಾಗಿ ಪ್ರಸಾರ ಮಾಡಿದವು. ಇದರಿಂದ ಮಾಧ್ಯಮಗಳು ಪಕ್ಷಪಾತ ಧೋರಣೆ ತಳೆದಿವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.  

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ