ಮೋದಿ ಕೈಯಲ್ಲಿ ಕಮಲದ ವಿವಾದ

ಬುಧವಾರ, 30 ಏಪ್ರಿಲ್ 2014 (11:21 IST)
ಅಹಮದಾಬಾದ್‌ನ ರಾನಿಪ್‌ನಲ್ಲಿ ತಮ್ಮ ತಾಯಿ ನರ್ಮದಾ ಬೆನ್ ಜತೆ ಬಂದು  ಮತ ಚಲಾಯಿಸಿದ ಬಿಜೆಪಿಯ ಪ್ರಧಾನಿ ನರೇಂದ್ರ ಮೋದಿ, ನಂತರ ನಡೆಸಿದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ತಮ್ಮ ಕೈಬೆರಳಿನಲ್ಲಿ ಬಿಜೆಪಿಯ ಲೋಗೋ ಕಮಲವನ್ನು ಹಿಡಿದುಕೊಂಡು, ಮಾತನಾಡಿದ್ದು ವಿವಾದಕ್ಕೆ ಕಾರಣವಾಗಿದೆ.  
 
ಮತದಾನ ಕೇಂದ್ರದ ಅನತಿ ದೂರದಲ್ಲಿ ಕಮಲದ ಗುರುತನ್ನು ಹಿಡಿದುಕೊಂಡು ತಮ್ಮ ಕೈ ಬೆರಳಿಗೆ ಹಾಕಲಾದ ಮತದಾನದ ಚಿಹ್ನೆಯನ್ನು ತೋರಿಸಿದರಲ್ಲದೇ, ಅದನ್ನು ಹಿಡಿದುಕೊಂಡು ಮೋದಿ ಪತ್ರಿಕಾ ಗೋಷ್ಠಿಯನ್ನು ನಡೆಸಿರುವುದನ್ನು ಕಾಂಗ್ರೆಸ್ ಖಂಡಿಸಿದೆ. ಈ ತರಹದ ಪ್ರಯೋಗಗಳನ್ನು ಮಾಡುವುದರ ಮೂಲಕ ಮೋದಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. 
 
ಈ ಘಟನೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವ ಕಾಂಗ್ರೆಸ್ ವಾರಣಾಸಿ ಮತ್ತು ವಡೋದರಾದಲ್ಲಿ ಮೋದಿಯ ನಾಮಪತ್ರ ದಾಖಲಾತಿಯನ್ನು ರದ್ದು ಪಡಿಸುವಂತೆ ಮನವಿ ಮಾಡಿದ್ದಾರೆ. 
 
ಮತ ಚಲಾಯಿಸಿದ ನಂತರ  ಮಾತಮಾಡಿದ ಮೋದಿ ಸಾರ್ವಜನಿಕರಲ್ಲಿ ಮತ ಚಲಾಯಿಸುವಂತೆ ಮನವಿ ಮಾಡಿದರು. ಒಂದು ಸದೃಢ ಸರಕಾರವನ್ನು ರಚಿಸಲು, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮತವನ್ನು ನೀಡಿ ಎಂದ ಅವರು ಗುಜರಾತಿನಲ್ಲಿ ಶಾಂತಿಯುತ ಚುನಾವಣೆ ನಡೆಯುತ್ತಿರುವುದಕ್ಕೆ ಜನತೆಯನ್ನು ಅಭಿನಂದಿಸಿದರು. 
 

ವೆಬ್ದುನಿಯಾವನ್ನು ಓದಿ