ದೆಹಲಿಯಲ್ಲಿ ಮರುಚುನಾವಣೆಗೆ ಒತ್ತಾಯಿಸಿ ಮನೆ ಮನೆ ಅಭಿಯಾನ ಆರಂಭಿಸಿದ ಆಪ್

ಬುಧವಾರ, 13 ಆಗಸ್ಟ್ 2014 (15:45 IST)
ಮರು ಚುನಾವಣೆಗೆ ಒತ್ತಾಯಿಸುತ್ತಿರುವ ಆಪ್ ತಮ್ಮ ಬೇಡಿಕೆಗೆ ಜನರ ಬೆಂಬಲವನ್ನು ಕೋರಿ ಮನವಿ ಅಭಿಯಾನವನ್ನು ಆರಂಭಿಸಿದೆ. 
 
ಕಾಂಗ್ರೆಸ್ ಬಾಹ್ಯ ಬೆಂಬಲದೊಂದಿಗೆ, 49 ದಿನಗಳ ಕಾಲ ಆಪ್ ದೆಹಲಿಯಲ್ಲಿ ಆಡಳಿತ ನಡೆಸಿತ್ತು. ಕಳೆದ ಫೆಬ್ರುವರಿ ತಿಂಗಳಲ್ಲಿ ವಿಧಾನಸಭೆಯಲ್ಲಿ ಲೋಕಜನಪಾಲ್ ಮಸೂದೆಯನ್ನು ಪಾಸ್ ಮಾಡಲು ಸರಕಾರ ವಿಫಲವಾದುದರಿಂದ ನೊಂದ ಕೇಜ್ರಿವಾಲ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಿನಿಂದ ದೆಹಲಿಯಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ.
 
ವಿಧಾನಸಭೆಯನ್ನು ಅಮಾನತಿನಲ್ಲಿಡಲಾಗಿದ್ದು, ಯಾವ ಪಕ್ಷವು ಕೂಡ ಸರಕಾರ ರಚಿಸುವ ಪ್ರಸ್ತಾವನೆಯನ್ನು ಸಲ್ಲಿಸಿಲ್ಲ . 
 
ಕಳೆದ ಅನೇಕ ದಿನಗಳಿಂದ ಆಪ್ ಮರು ಚುನಾವಣೆ ನಡೆಸುವಂತೆ ಪದೇ ಪದೇ ಒತ್ತಾಯಿಸುತ್ತಿದ್ದರೂ ಕೇಂದ್ರ ಅದಕ್ಕೆ ಸ್ಪಂದಿಸುತ್ತಿಲ್ಲವಾದ್ದರಿಂದ ಮನೆ ಮನೆ ಭೇಟಿ ನೀಡಿ ಸಹಿ ಸಹಿತ ಮನವಿಯನ್ನು ಸಂಗ್ರಹಿಸಿ  ಭಾರತ ಸರಕಾರಕ್ಕೆ ಕಳುಹಿಸುವ ಉದ್ದೇಶವನ್ನು ಆಪ್ ಹೊಂದಿದೆ. 
 
 ಸರಕಾರ ದೆಹಲಿ ಜನರ ಸಮಸ್ಯೆಗಳಿಗೆ ಪರಿಹಾರ ಕೂಡ ನೀಡುತ್ತಿಲ್ಲ, ದೆಹಲಿಗೆ ಚುನಾಯಿತ ಸರಕಾರವನ್ನು ನೀಡಲು ಮಾರ್ಗವನ್ನು ಕೂಡ ತೆರವುಗೊಳಿಸುತ್ತಿಲ್ಲ. ಆದ್ದರಿಂದ ಆಪ್, ಮನೆ ಮನೆ ಪ್ರಚಾರ ನಡೆಸಿ ಜನರೇ  ಚುನಾಯಿತ ಸರಕಾರಕ್ಕೆ ಒತ್ತಾಯಿಸುವಂತೆ ಮಾಡಲಿದೆ ಎಂದು ಆಪ್ ನಾಯಕ ಮನೀಶ್ ಸಿಸೋಡಿಯಾ ಹೇಳಿದ್ದಾರೆ. 

ವೆಬ್ದುನಿಯಾವನ್ನು ಓದಿ