ಕಮಲದ ತೆಕ್ಕೆಯಲಿ ಆಪ್ ನಾಯಕರು

ಶನಿವಾರ, 22 ನವೆಂಬರ್ 2014 (12:01 IST)
ದೆಹಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದು ಈ ಮಹತ್ವದ ಘಟ್ಟದಲ್ಲಿ, ಆಪ್ ಪಕ್ಷದ ಹಿರಿಯ ನಾಯಕರಾದ ಮಣಿಂದರ್ ಸಿಂಗ್ ಧೀರ್ ಮತ್ತು ಹರೀಶ್ ಖನ್ನಾ ಭಾರತೀಯ ಜನತಾ ಪಕ್ಷ ಸೇರುವುದರ ಮೂಲಕ ಕೇಜ್ರಿವಾಲ್‌ಗೆ ಶಾಕ್ ನೀಡಿದ್ದಾರೆ.

ಈ ಸಂದರ್ಭದಲ್ಲಿ  ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಧೀರ್, "ಬಿಜೆಪಿಗೆ ತಮ್ಮಿಂದ ಸಾಧ್ಯವಾದಷ್ಟು ಯೋಗದಾನ ನೀಡಲು ಪ್ರಯತ್ನಿಸುತ್ತೇನೆ. ಬಿಜೆಪಿ ಸೇರಿರುವುದು ನನ್ನ ಮನೆಗೆ ಮರಳಿ  ಹಿಂತಿರುಗಿದಂತಾಗಿದೆ" ಎಂದು ಹೇಳಿದ್ದಾರೆ. ಅವರು ದೆಹಲಿ ವಿಧಾನಸಭೆಯ ಮಾಜಿ ಸ್ಪೀಕರ್ ಆಗಿದ್ದಾರೆ. 
 
"ನನ್ನ ಈ ನಡೆಯ ತರುವಾಯ ಆಪ್‌ನ ಯಾವೊಬ್ಬ ನಾಯಕರು ನನ್ನನ್ನು ಸಂಪರ್ಕಿಸಿಲ್ಲ. ಒಂದು ವೇಳೆ ಯಾರಾದರೂ ನನ್ನನ್ನು ಸಂಪರ್ಕಿಸಿದರೆ ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಮಂತ್ರದತ್ತ ಒಮ್ಮೆ ದೃಷ್ಟಿ ಬೀರಿ  ಮತ್ತು ನೀವು ಕೂಡ ಬಿಜೆಪಿಯನ್ನು ಸೇರಿ ಎಂದು ಸಲಹೆ ನೀಡುತ್ತೇನೆ" ಎಂದು ಅವರು ಹೇಳಿದ್ದಾರೆ. 
 
ತಿಮರ್ಪುರಾ ಪ್ರದೇಶದ ಶಾಸಕರಾದ ಖನ್ನಾ ಈ ತಿಂಗಳ ಆರಂಭದಲ್ಲೇ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ಆಪ್ ಕೈಗೊಂಡ ಕೆಲವು ನಿರ್ಧಾರಗಳು ನನಗೆ ನೋವನ್ನು ತಂದಿವೆ ಎಂದು ಅವರು ಹೇಳಿಕೆ ನೀಡಿದ್ದರು.  
 
ಕೇಂದ್ರ ಸರಕಾರ ದೆಹಲಿ ವಿಧಾನಸಭೆ ವಿಸರ್ಜನೆಗೆ ಶಿಫಾರಸ್ಸು ಮಾಡಿ ಮರು ಚುನಾವಣೆಗೆ ವೇದಿಕೆಯನ್ನು ಕಲ್ಪಿಸುತ್ತಿದ್ದಂತೆ, ಎಲ್ಲ ರಾಜಕೀಯ ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ರಚಾರದ ತಂತ್ರವನ್ನು ಹೆಣೆಯುವುದರಲ್ಲಿ ನಿರತವಾಗಿದೆ. 
 
ಆಪ್ ನಾಯಕ ಕೇಜ್ರಿವಾಲ್  ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದಾಗಿನಿಂದ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ. 

ವೆಬ್ದುನಿಯಾವನ್ನು ಓದಿ