ಡೋಪ್ ಪರೀಕ್ಷೆಗೊಳಪಡಲು ಪಂಜಾಬ್ ಡಿಸಿಎಂಗೆ ಆಪ್ ಸಂಸದ ಒತ್ತಾಯ

ಬುಧವಾರ, 25 ನವೆಂಬರ್ 2015 (20:23 IST)
ಪಂಜಾಬ್‌ನ ಆಮ್ ಆದ್ಮಿ ಪಾರ್ಟಿ ಸಂಸದ ಭಗವಂತ್ ಮಾನ್ ತಮ್ಮನ್ನು ಡ್ರಗ್ ಅಡಿಕ್ಟ್ ಎಂದು ಆರೋಪಿಸುತ್ತಿರುವ ಉಪಮುಖ್ಯಮಂತ್ರಿ ಸುಖ್ಬೀರ್ ಬಾದಲ್ ಮತ್ತು ಇತರ ಅಧಿಕಾರರೂಢ ಸಾದ್ ನಾಯಕರಿಗೆ ತಾಕತ್ತಿದ್ದಲ್ಲಿ ಡೋಪ್ ಪರೀಕ್ಷೆಗೊಳಪಡಲಿ ಎಂದು ಗುಡುಗಿದ್ದಾರೆ.   
 
ಸಂಗ್ರೂರ್ ಲೋಕಸಭಾ ಕ್ಷೇತ್ರದ ಸಂಸದರಾದ ಭಗವಂತ್ ಮಾನ್ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ವಿಡಿಯೋ ಬಿಡುಗಡೆ ಮಾಡಿ ಸುಖ್ಬೀರ್ ಸಿಂಗ್ ಬಾದಲ್ ಮತ್ತು ಇತರ ಸಾದ್ ನಾಯಕರು ತಮ್ಮ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎನ್ನುವ ಸಂದೇಶ ರವಾನಿಸಿದ್ದಾರೆ.
 
ಪಂಜಾಬ್ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಮತ್ತು ಅವರ ಪಕ್ಷದ ನಾಯಕರು ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಅಥವಾ ವೈದ್ಯಕೀಯ ವರದಿಯಿಲ್ಲದೇ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ. 
 
ತಾಕತ್ತಿದ್ರೆ ಉಪಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಮತ್ತು ಅವರ ಪಕ್ಷದ ಎಲ್ಲಾ ನಾಯಕರು ಸುಳ್ಳುಪತ್ತೆ ಪರೀಕ್ಷೆಗೊಳಪಡಲಿ. ನಾನು ಮೊದಲು ಡೋಪ್ ಪರೀಕ್ಷೆಗೊಳಪಡುತ್ತೇನೆ ಎಂದು ಭಗವಂತ್ ಮಾನ್ ಗುಡುಗಿದ್ದಾರೆ.
 
ಡೋಪ್ ಪರೀಕ್ಷೆಗೊಳಪಟ್ಟ ನಂತರ ಯಾರು ಡ್ರಗ್ ಅಡಿಕ್ಟ್ ಎನ್ನುವುದು ಬಹಿರಂಗವಾಗುತ್ತದೆ ಎಂದು ಹೇಳಿದ್ದಾರೆ.
 
ಕಳೆದ ನವೆಂಬರ್ 23 ರಂದು ನಡೆದ ಸಾರ್ವಜನಿಕ ಸಭೆಯಲ್ಲಿ ಸುಖ್ಬೀರ್ ಸಿಂಗ್ ಬಾದಲ್, ಸಂಸದನಿಗೆ ಡ್ರಗ್ಸ್ ಸೇವನೆ ಬಿಡುವಂತೆ ತಿಳಿ ಹೇಳಿ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಒತ್ತಾಯಿಸಿದ್ದರು.  

ವೆಬ್ದುನಿಯಾವನ್ನು ಓದಿ