ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಬಹುಮತ: ಕೇಜ್ರಿವಾಲ್

ಗುರುವಾರ, 11 ಫೆಬ್ರವರಿ 2016 (16:02 IST)
ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಹುಮತಗಳಿಸಿ ಅಧಿಕಾರಕ್ಕೆ ಬರಲಿದ್ದು, ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನವನ್ನು ಪಡೆಯುವ ಸಾಧ್ಯತೆಗಳಿವೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
 
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಬಹುಮತ ಪಡೆದಂತೆ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲೂ ನಾವು ಗೆಲ್ಲಲಿದ್ದೇವೆ ಎಂದು ಕೇಜ್ರಿವಾಲ್, ತಮ್ಮ ನಿವಾಸಕ್ಕೆ ಆಗಮಿಸಿದ್ದ ಪತ್ರಕರ್ತರ ತಂಡಕ್ಕೆ ತಿಳಿಸಿದ್ದಾರೆ.  
 
ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನ ಪಡೆಯಬಹುದಾಗಿದೆ. ಅಕಾಲಿಗಳು ತುಂಬಾ ಕೆಟ್ಟ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದರು.
 
ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ 70 ಸೀಟುಗಳಲ್ಲಿ 67 ಸೀಟುಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
 
ಆಪ್ ಪಕ್ಷದಲ್ಲಿ ಪ್ರತಿಯೊಂದು ಮತ ಕೇಂದ್ರದಲ್ಲಿ ಕಾರ್ಯಕರ್ತರಿದ್ದಾರೆ. ಪಂಜಾಬ್ ರಾಜ್ಯದಾದ್ಯಂತ ಮನೆ ಮನೆಗೆ ತೆರಳಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇತರರು ಎಚ್ಚೆತ್ತುಕೊಳ್ಳುವ ಮೊದಲೇ ಅವರ ಕಥೆ ಮುಗಿದಿರುತ್ತದೆ ಎಂದು ಕೇಜ್ರಿವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
 
ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಕೇಜ್ರಿವಾಲ್, ಸೂಕ್ತ ಸಮಯದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸಲಾಗುವುದು ಎಂದರು.

ವೆಬ್ದುನಿಯಾವನ್ನು ಓದಿ