ಸಾರ್ವಜನಿಕ ಶೌಚಾಲಯದಲ್ಲಿ ಅತ್ಯಾಚಾರವೆಸಗುತ್ತಿದ್ದ ಎಬಿಸಿಡಿ ಡ್ಯಾನ್ಸರ್

ಬುಧವಾರ, 1 ಜುಲೈ 2015 (12:51 IST)
ಇತ್ತೀಚಿಗೆ ಬಿಡುಗಡೆಯಾದ ಹಿಂದಿ ಚಲನಚಿತ್ರ ಎಬಿಸಿಡಿ-2 ಚಿತ್ರದ ಬ್ಯಾಕ್ ಅಪ್ ಡ್ಯಾನ್ಸರ್ ನಿಲೇಶ್ ನಿರ್ಭವಾನೆ (20) 14 ವರ್ಷದ ಬುದ್ಧಿಮಾಂದ್ಯ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧಿಸಲ್ಪಟ್ಟಿದ್ದಾನೆ. 

ವೃತ್ತಿಯಲ್ಲಿ ನೃತ್ಯಗಾರನಾಗಿರುವ ನಿಲೇಶ್ ಮತ್ತು ಆತನ ಇಬ್ಬರು ಸ್ನೇಹಿತರು ಬಾಲಕಿಯನ್ನು ಸಾರ್ವಜನಿಕ ಶೌಚಾಲಯ ಮತ್ತು ಇತರ ನಿರ್ಜನ ಪ್ರದೇಶಗಳಿಗೆ ಕೊಂಡೊಯ್ದು ಅನೇಕ ಬಾರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
 
ಜೂನ್ 26ರಂದು ಪ್ಯಾಟ್ ನಗರ ಪೊಲೀಸರು ನಿಲೇಶ್‌ನನ್ನು ಬಂಧಿಸಿದ್ದು, ತನ್ನ ಅಪರಾಧವನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. 
 
ಕೆಲದಿನಗಳಿಂದ ಹುಡುಗಿಯ ವರ್ತನೆಯಲ್ಲಿ ಅಸಹಜತೆಯನ್ನು ಗಮನಿಸಿದ್ದ ಶಾಲಾ ಶಿಕ್ಷಕಿ ಏನಾದರೂ ಸಮಸ್ಯೆಯಾ ಎಂದು ಪ್ರಶ್ನಿಸಿದಾಗ ಮೂವರು ಯುವಕರು ಆಕೆಯ ಮೇಲೆ ನಡೆಸಿದ ಕುಕೃತ್ಯ ಬೆಳಕಿಗೆ ಬಂದಿತ್ತು. ಕಳೆದ ಒಂದು ತಿಂಗಳಿಂದ ತನ್ನ ಮೇಲೆ ಅತ್ಯಾಚಾರವಾಗುತ್ತಿರುವುದನ್ನು ಬಾಲಕಿ ಬಹಿರಂಗ ಪಡಿಸಿದ್ದಳು. ಜೂನ್ 25 ರಂದು ಬಾಲಕಿಯ ಪೋಷಕರು ಪ್ಯಾಟ್ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣವನ್ನು ದಾಖಲಿಸಿದ್ದರು. 
 
ಆರೋಪಿಗಳೊಬ್ಬನಿಗೆ ಮುಂಬಾಗದ ಎರಡು ಹಲ್ಲುಗಳು ಮುರಿದಿವೆ ಎಂದು ಬಾಲಕಿ ಹೇಳಿದ್ದು ಪೊಲೀಸರಿಗೆ ನಿಲೇಶನನ್ನು ಬಂಧಿಸಲು ಪ್ರಮುಖ ಸಾಕ್ಷಿಯಾಗಿ ನೆರವಾಯಿತು. 
 
ಐಪಿಸಿ ಸೆಕ್ಷನ್ 376ಡಿ (ಸಾಮೂಹಿಕ ಅತ್ಯಾಚಾರ), 377(ಅಸ್ವಾಭಾವಿಕ ಅಪರಾಧ) ಮತ್ತು 34 (ಸಾಮಾನ್ಯ ಉದ್ದೇಶದಿಂದ ಅನೇಕ ಜನರು ಮಾಡಿದ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. 

ವೆಬ್ದುನಿಯಾವನ್ನು ಓದಿ