ತಲೆಮರೆಸಿಕೊಂಡಿರುವ ಟೆಕ್ಕಿಯಿಂದ ಸುಷ್ಮಾ ಸ್ವರಾಜ್‌ಗೆ ದೂರು

ಮಂಗಳವಾರ, 12 ಜುಲೈ 2016 (15:01 IST)
ತಮ್ಮ ಮಾಜಿ ಸಹೋದ್ಯೋಗಿಗೆ ಅಸಭ್ಯ ಸಂದೇಶ ಕಳುಹಿಸಿದ ಆರೋಪ ಎದುರಾದ ಹಿನ್ನೆಲೆಯಲ್ಲಿ ಸದ್ಯ ತಲೆ ಮರೆಸಿಕೊಂಡಿರುವ ಸಾಫ್ಟವೇರ್ ಎಂಜಿನಿಯರ್, ಪೊಲೀಸರು ತನ್ನ ಪೋಷಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ಗೆ ದೂರು ನೀಡಿದ್ದಾರೆ. 
 
ಪೀಣ್ಯಾ ಸಮೀಪದ ಹೆಚ್‌ಎಂಟಿ ಕಾಲೋನಿ ನಿವಾಸಿಯಾಗಿರುವ ಆರೋಪಿ ಭರತ್ ವಿರುದ್ಧ ಮಹಿಳೆಯೋರ್ವರು ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಜೂನ್ 27 ರಂದು ದೂರು ಸಲ್ಲಿಸಿದ್ದಾರೆ. ಆರೋಪಿ ಮತ್ತು ದೂರುದಾತೆ ಈ ಹಿಂದೆ ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದರು. 6 ತಿಂಗಳ ಹಿಂದೆ ತಾನು ಜರ್ಮನಿಯಲ್ಲಿದ್ದಾಗ ಭರತ್ ಕೂಡ ನನ್ನದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಆ ಸಂದರ್ಭದಲ್ಲಿ ನನಗವರು ಅಸಭ್ಯ ಸಂದೇಶಗಳನ್ನು ಕಳುಹಿಸುತ್ತಿದ್ದರು. ನಾನವರಿಗೆ ಎಷ್ಟು ಹೇಳಿದರೂ ಅವರು ತಮ್ಮ ದುರ್ವರ್ತನೆಯನ್ನು ಮುಂದುವರೆಸಿದರು. ನಾನು ಬೆಂಗಳೂರಿಗೆ ವಾಪಸ್ಸಾದೆ. ಆದರೆ ಭರತ್ ಸಂದೇಶ ಕಳುಹಿಸುವುದನ್ನು ಮುಂದುವರೆಸಿದರು. ಕೊನೆಗೆ ಬೇರೆ ದಾರಿ ಕಾಣದೆ ನಾನು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದೆ ಎಂದಾಕೆ ಹೇಳಿದ್ದಾರೆ.
 
ದೂರನ್ನು ಆಧರಿಸಿ ನಾವು ಭರತ್ ಪೋಷಕರನ್ನು ಭೇಟಿಯಾದೆವು. ತಲೆ ಮರೆಸಿಕೊಂಡಿರುವ ಭರತ್ ನಾವು ಆತನ ತಂದೆ-ತಾಯಿಗಳಿಗೆ ಹಿಂಸೆ ನೀಡುತ್ತಿದ್ದೇವೆ ಎಂದು ಸಚಿವೆಗೆ ಟ್ವೀಟ್ ಮಾಡಿದ್ದಾನೆ ಎಂದು ಪೊಲೀಸರು ತಮ್ಮಿಂದೇನು ತಪ್ಪಾಗಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. 
 
ತಮ್ಮ ಸಹೋದರನ ಮೇಲೆ ದೂರು ದಾಖಲು ಮಾಡಿದ್ದಕ್ಕೆ ಕೋಪಗೊಂಡ ಭರತ್ ಸಹೋದರ ಶರತ್ ದೂರುದಾತೆ ಮಹಿಳೆಯ ಮೇಲೆಗೆ ಹೋಗಿ ಆಕೆಯ ಸಂಬಂಧಿಕರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಭರತ್ ಈಗ ಜರ್ಮನಿಯಲ್ಲಿಲ್ಲ. ಆತ ಮೈಸೂರು ಅಥವಾ ಹೈದರಾಬಾದ್‌ನಲ್ಲಿರಬಹುದೆಂದು ಊಹಿಸಲಾಗಿದೆ. ಆತನ ಮನೆಗೆ ಹೋದಾಗ ಶರತ್ ತನಿಖೆಗೆ ಸಹಕರಿಸುವುದರ ಬದಲು ಒರಟಾಗಿ ವರ್ತಿಸಿದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ