ಜೆಎನ್‌ಯು ವಿವಾದ :6 ದಿನದಲ್ಲಿ 800 ಫೋನ್ ಕರೆಮಾಡಿದ್ದ ಆರೋಪಿ ಉಮರ್

ಶುಕ್ರವಾರ, 19 ಫೆಬ್ರವರಿ 2016 (13:11 IST)
ಜೆಎನ್‌ಯುನಲ್ಲಿ ದೇಶದ್ರೋಹಿ ಘೋಷಣೆಗಳನ್ನು ಕೂಗಿದ ಪ್ರಕರಣದ ಪ್ರಮುಖ ಆರೋಪಿ  ಉಮರ್ ಖಾಲಿದ್ ಫೋನ್ ಕರೆ ದಾಖಲೆಗಳು ದೆಹಲಿ ಪೊಲೀಸರಿಗೆ ಲಭ್ಯವಾಗಿದ್ದು, ಫೆಬ್ರವರಿ 3 ರಿಂದ ಘಟನೆ ನಡೆದ ಫೆಬ್ರವರಿ 9ರವರೆಗೆ ಆತ ತನ್ನ ಎರಡು ನಂಬರ್‌ಗಳಿಂದ 800 ಕರೆ ಮಾಡಿದ್ದ ಎಂದು ತಿಳಿದು ಬಂದಿದೆ. 
 
ಖಾಲಿದ್ ತನ್ನ ಮೊಬೈಲ್‌ನಿಂದ ಮಾಡಿರುವ 800 ಕರೆಗಳಲ್ಲಿ 38 ಕರೆಗಳು ಜಮ್ಮು ಕಾಶ್ಮೀರಕ್ಕೆ ಮಾಡಲ್ಪಟ್ಟಿದ್ದು, ಅಲ್ಲಿಂದ ಖಾಲಿದ್‌ಗೆ 65 ಕರೆಗಳು ಬಂದಿವೆ ಎಂಬ ಸತ್ಯ ಹೊರಬಿದ್ದಿದೆ. 
 
ಜಮ್ಮು ಮತ್ತು ಕಾಶ್ಮೀರಕ್ಕೆ ಮಾಡಿರುವ 38 ಕರೆಗಳಲ್ಲಿ ಹೆಚ್ಚಿನವು ಮೂರು ನಿರ್ದಿಷ್ಟ ಸಂಖ್ಯೆಗಳಿಗೆ ಹೋಗಿವೆ. 4,5 ಕರೆಗಳು ಬೇರೆ ನಂಬರ್‌ಗೆ ಮಾಡಲ್ಪಟ್ಟಿವೆ. ಕೇಂದ್ರಿಯ ವಿಶ್ವವಿದ್ಯಾಲಯ ಕಾಶ್ಮೀರದಲ್ಲಿರುವ ಒಬ್ಬ ವ್ಯಕ್ತಿಗೂ ಸಹ ಒಂದು ಕರೆ ಹೋಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. 
 
ದಾಖಲೆಗಳ ಪ್ರಕಾರ ದೆಹಲಿ ಹೊರಗೆ ಅನೇಕ ನಗರಗಳಷ್ಟೇ ಅಲ್ಲದೆ ಗಲ್ಫ ಮತ್ತು ಬಾಂಗ್ಲಾ ದೇಶಗಳಿಗೂ ಕಾಲ್ ಹರಿದಾಡಿದೆ. 
 
ಡಿಸೆಂಬರ್ ಕೊನೆಯವಾರದಿಂದ ಕರೆಗಳು ಹೆಚ್ಚು ದಾಖಲಾಗಿದ್ದು, ಫೆಬ್ರವರಿ 9ರ ಕಾರ್ಯಕ್ರಮಕ್ಕೆ ಆಗಿನಿಂದಲೇ ತಯಾರಿ ನಡೆಸಲಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ. 
 
ಕನ್ಹೈಯ್ಯಾ ಕುಮಾರ್ ಬಂಧನದ ಬಳಿಕ ಸದ್ಯ ತಲೆ ಮರೆಸಿಕೊಂಡಿರುವ ಕಾರ್ಯಕ್ರಮದ ಪ್ರಮುಖ ಆಯೋಜಕನಾಗಿದ್ದ  ಡೆಮಾಕ್ರೆಟಿಕ್ ಸ್ಟುಡೆಂಟ್ಸ್ ಯೂನಿಯನ್ ಮಾಜಿ ನಾಯಕ ಖಾಲಿದ್ ಎರಡು ಮೊಬೈಲ್ ಸಂಖ್ಯೆಗಳು ಸಹ ಸ್ವಿಚ್ಡ್ ಆಫ್ ಆಗಿವೆ. ಕರ್ನಾಟಕ ಸೇರಿ 10 ರಾಜ್ಯಗಳಲ್ಲಿ ಆತನಿಗಾಗಿ ಹುಡುಕಾಟವನ್ನು ನಡೆಸಲಾಗುತ್ತಿದೆ. 

ವೆಬ್ದುನಿಯಾವನ್ನು ಓದಿ