ವಾದ್ರಾ ವಿರುದ್ಧ ಸಾಕ್ಷಗಳಿದ್ದರೆ ಕಾರ್ಯಪ್ರವೃತ್ತರಾಗಿ: ಕಾಂಗ್ರೆಸ್

ಗುರುವಾರ, 21 ಮೇ 2015 (17:24 IST)
ಭೂ ಹಗರಣಕ್ಕೆ ಸಂಬಂಧಿಸಿದಂತೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರ ವಿರುದ್ಧ ಹರಿಯಾಣಾ ಮತ್ತು ರಾಜಸ್ಥಾನ ಸರ್ಕಾರಗಳಿಗೆ ಸಾಕ್ಷಾಧಾರಗಳು ಲಭ್ಯವಾದರೆ ಕಾನೂನು ಕ್ರಮ ಕೈಗೊಳ್ಳಬಹುದು, ಅದಕ್ಕೆ ನಾವು ಅಡ್ಡಿಪಡಿಸುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. 

"ಕಾಂಗ್ರೆಸ್ ವೈಯಕ್ತಿಕ ದ್ವೇಷವನ್ನು ಸಾಧಿಸುವುದಿಲ್ಲ. ವ್ಯಕ್ತಿಯೊಬ್ಬರ ವಿರುದ್ಧ ಭೃಷ್ಟಾಚಾರದ ಆರೋಪ ಕೇಳಿಬಂದರೆ ನಾವು ಅವರ ಸಂಬಂಧಿಕರನ್ನು ಗುರಿಯಾಗಿಸುವುದಿಲ್ಲ", ಎಂದು ಕಾಂಗ್ರೆಸ್ ವಕ್ತಾರ ರಾಜ್ ಬಬ್ಬರ್ ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. 
 
ಮಾಧ್ಯಮಗಳು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದ ರಾಜ್ ಬಬ್ಬರ್, "ಹರಿಯಾಣಾ ಮತ್ತು ರಾಜಸ್ಥಾನ ಸರಕಾರಗಳ ಬಳಿ  ಭೂವಿವಾದಕ್ಕೆ ಸಂಬಂಧಿಸಿದಂತೆ ರಾಬರ್ಟ್ ವಾದ್ರಾ ಅವರ ವಿರುದ್ಧ ಸಾಕ್ಷಗಳಿದ್ದರೆ  ಅವರು ಪ್ರಕರಣವನ್ನು ದಾಖಲಿಸಬಹುದು, ರಿಓಪನ್ ಮಾಡಿಸಬಹುದು, ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲೇರಬಹುದು. ತೀರ್ಪು ಏನೇ ಆದರೂ ನಾವು ಅದನ್ನು ಒಪ್ಪಿಕೊಳ್ಳುತ್ತೇವೆ", ಎಂದಿದ್ದಾರೆ. 
 
"ಮೋದಿಯವರು ಕಾರ್ಪೋರೇಟ್ ಪರ ಲಾಬಿ ನಡೆಸುತ್ತಿದ್ದಾರೆ. ಒಂದು ರೂಪಾಯಿಗೆ ಚಾಕಲೇಟು ಸಹ ಸಿಗುವುದಿಲ್ಲ. ಆದರೆ  ಉದ್ಯಮಿಗಳಿಗೆ ಆ ಬೆಲೆಯಲ್ಲಿ ಹೆಕ್ಟೇರ್‌ಗಟ್ಟಲೆ ಭೂಮಿ ನೀಡುತ್ತಿದ್ದಾರೆ", ಎಂದು ಹೇಳಿದ ಬಬ್ಬರ್ ಈ ಕುರಿತು ನಿಖರ ದಾಖಲೆ ನೀಡಲಿಲ್ಲವಾದರೂ ತನಿಖೆಗೆ ಆಗ್ರಹಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ