ಪಾಕ್ ಗಾಯಕನಿಗೆ ಬಹಿಷ್ಕಾರ: ಸಮರ್ಥಿಸಿಕೊಂಡ ಶಿವಸೇನೆ

ಗುರುವಾರ, 8 ಅಕ್ಟೋಬರ್ 2015 (17:32 IST)
ಪಾಕ್‌ನ ಖ್ಯಾತ ಗಜಲ್ ಮಾಂತ್ರಿಕ ಗುಲಾಂ ಅಲಿ ಅವರ ಸಂಗೀತ ಕಛೇರಿ ರದ್ದುಗೊಳ್ಳಲು ಕಾರಣವಾದ ಶಿವಸೇನೆ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ಮಧ್ಯೆ ಶಿವಸೇನೆಯ ನಿರ್ಣಯವನ್ನು ಯುವಸೇನಾ ಅಧ್ಯಕ್ಷ ಆದಿತ್ಯ ಠಾಕ್ರೆ ಸಮರ್ಥಿಸಿಕೊಂಡಿದ್ದು, ಭಯೋತ್ಪಾದನೆ ಮತ್ತು ಸಾಂಸ್ಕೃತಿಕ ಸಂಬಂಧ ಜತೆಗೆ ಸಾಗಲು ಸಾಧ್ಯವಿಲ್ಲ ಎಂದಿದ್ದಾರೆ. 

"ಕಾಶ್ಮೀರದ ಗಡಿಯಲ್ಲಿ ನಮ್ಮ ಸೈನಿಕರು ಹುತಾತ್ಮರಾಗುತ್ತಿರುವಾಗ ನಾವು ಇಲ್ಲಿ ಕುಳಿತು ಸಂಗೀತವನ್ನು ಆಹ್ಲಾದಿಸಲು ಸಾಧ್ಯವಿಲ್ಲ. ಪಾಕಿಸ್ತಾನದೊಂದಿಗೆ ಯಾವುದೇ ಸಂಬಂಧ ಹೊಂದುವುದು ದೇಶದ್ರೋಹದ ನಡೆ. ಕೆಲವು ರೀತಿಯಲ್ಲಾದರೂ ಬಹಿಷ್ಕಾರ ತೋರಿಸಬೇಕು", ಎಂದು ಶಿವಸೇನೆ ಅಧ್ಯಕ್ಷ ಹಾಗೂ ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಹೇಳಿದ್ದಾರೆ.
 
ನಮ್ಮ ಪಕ್ಷ ಸಂಗೀತ ಅಥವಾ ಕಲೆ ವಿರೋಧಿಯಲ್ಲ, ಆದರೆ ಗಡಿಯಲ್ಲಿ ಏರ್ಪಟ್ಟಿರುವ ಉದ್ವಿಗ್ನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಸಂಗೀತ ಕಚೇರಿಯನ್ನು ವಿರೋಧಿಸಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
 
ಪಾಕಿಸ್ತಾನಿ ಸಂಗೀತಗಾರ, ಗಝಲ್ ಮಾಂತ್ರಿಕ ಉಸ್ತಾದ್ ಗುಲಾಮ್ ಆಲಿಯವರು ಇದೇ ಶುಕ್ರವಾರ ಮುಂಬೈಯ ಷಣ್ಮುಖಾನಂದ್ ಹಾಲ್‌‌‌‌ನಲ್ಲಿ ಸಂಗೀತ ಕಛೇರಿ ನಡೆಸಿ ಕೊಡುವವರಿದ್ದರು. ಶಿವ ಸೇನೆಯ ಬೆದರಿಕೆಯ ಹಿನ್ನೆಲೆಯಲ್ಲಿ  ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.
 
ಗಝಲ್ ಗಾಯಕ ದಿವಂಗತ ಜಗ್ ಜೀತ್ ಸಿಂಗ್ ಸ್ಮರಣಾರ್ಥ ಗುಲಾಮ್ ಆಲಿಯವರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ