ಅಡ್ವಾಣಿಯವರಿಗೆ ಮತ್ತೆ ಅಪಮಾನ!

ಶುಕ್ರವಾರ, 22 ಮೇ 2015 (12:52 IST)
ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ್ದಾಗಿನಿಂದ ಪದೇ ಪದೇ ತಮ್ಮ ಪಕ್ಷದ ವರಿಷ್ಠ ಲಾಲ್‌ಕೃಷ್ಣ  ಅಡ್ವಾಣಿಯವರಿಗೆ ಅಪಮಾನ ಮಾಡುತ್ತಿರುವುದು ಬೆಳಕಿಗೆ ಬರುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಹ ವೇದಿಕೆಯಲ್ಲಿಯೇ ಅಡ್ವಾಣಿಯವರ ಮನಸ್ಸಿಗೆ ನೋವುಂಟು ಮಾಡಲಾಗಿತ್ತು. ಈಗ ಮತ್ತೆ ಅದು ಮರುಕಳಿಸಿದೆ.

ಉತ್ತರ ಪ್ರದೇಶದ ಮಥುರಾದಲ್ಲಿ ಮೇ 25 ರಂದು ನಡೆಯಲಿರುವ ಮಹತ್ವದ ಕಾರ್ಯಕ್ರಮದಲ್ಲಿ ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯವರಿಗೆ ಆಮಂತ್ರಣ ಪತ್ರವನ್ನು ಕಳುಹಿಸಲಾಗಿದೆ. ಆದರೆ ಪಕ್ಷದ ಮತ್ತೊಬ್ಬ ಹಿರಿಯ ನಾಯಕರಾದ ಲಾಲ್‌ಕೃಷ್ಣ ಅಡ್ವಾಣಿಯವರಿಗೆ ಕರೆ ಕಳುಹಿಸಿಲ್ಲ. 
 
ಈ ಕಾರ್ಯಕ್ರಮವನ್ನು ದೀನದಯಾಳ್ ಉಪಾಧ್ಯಾಯ್ ಜನ್ಮಭೂಮಿ ಸ್ಮಾರಕ ಸಮಿತಿ ಆಯೋಜಿಸಿದೆ. ಅಡ್ವಾಣಿಯವರು ಈ ಸಮಿತಿಯ ಸದಸ್ಯರಾಗಿಲ್ಲದ ಕಾರಣಕ್ಕೆ ಅವರನ್ನು ಆಮಂತ್ರಿಸಿಲ್ಲ ಎಂದು ಕಾರ್ಯಕ್ರಮದ ಆಯೋಜಕರು ಸ್ಪಷ್ಟನೆ ನೀಡಿದ್ದಾರೆ.
 
ಈ ಕುರಿತು ಪ್ರತಿಕ್ರಿಯಿಸಿರುವ ಸಮಿತಿಯ ಮುಖ್ಯಸ್ಥರಾದ ರೋಶನ್ ಲಾಲ್, "ವಾಜಪೇಯಿಯವರು ಅನಾರೋಗ್ಯದ ಕಾರಣ ಕಾರ್ಯಕ್ರಮಕ್ಕೆ ಬರಲಾರರು ಎಂಬ ಅರಿವಿದೆ. ಆದರೆ ಅವರು ಈ ಸಮಿತಿಯ ಮೊದಲ ಮುಖ್ಯಸ್ಥರಾಗಿದ್ದರು. ಈಗಲೂ ಸಹ ಅವರು ಈ ಸಮಿತಿಯಲ್ಲಿದ್ದಾರೆ. ಹೀಗಾಗಿ ಅವರಿಗೆ ಆಹ್ವಾನ ನೀಡಲಾಗಿದೆ.ಆದರೆ ಅಡ್ವಾಣಿಯವರು ಎಂದಿಗೂ ಈ ಸಮಿತಿಯಲ್ಲಿ ಗುರುತಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಕರೆಯಲಾಗಿಲ್ಲ", ಎಂದಿದ್ದಾರೆ.
 
ಗಮನಾರ್ಹ ವಿಷಯವೇನೆಂದರೆ ಪ್ರಧಾನಿ ಮೋದಿಯವರು ಸಹ ಈ ಸಮಿತಿಯ ಸದಸ್ಯರಲ್ಲ. ಆದರೆ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. 
 
'ಮೋದಿಯವರು ಸಹ ಈ ಸಮಿತಿಯ ಸದಸ್ಯರಲ್ಲ. ಮತ್ತ್ಯಾಕೆ ಅವರನ್ನು ಆಹ್ವಾನಿಸಲಾಗಿದೆ', ಎಂದು ಮರುಪ್ರಶ್ನೆ ಹಾಕಿದ್ದಕ್ಕೆ ಉತ್ತರಿಸಿದ ರೋಶನ್, "ಮೋದಿ ಪಕ್ಷಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಲಿದ್ದಾರೆ. ನಾವು ಕೇವಲ ಅವರನ್ನು ಸ್ವಾಗತಿಸಲಿದ್ದೇವೆ", ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ