ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಮತ ಎಣಿಕೆಯ ಮುನ್ನಾದಿನವಾದ ನಿನ್ನೆಯಿಂದಲೇ ಸರಕಾರ ರಚನೆ, ಗೆಲುವಿನ ಸಂಭ್ರಮಾಚರಣೆಯ ತಯಾರಿಯಲ್ಲಿದ್ದ ಬಿಜೆಪಿ, ಲೋಕಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಲು ಹಿರಿಯ ನಾಯಕ ಅಡ್ವಾಣಿಯವರನ್ನು ಒಪ್ಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಧಾನಿ ಹುದ್ದೆ ಅಭ್ಯರ್ಥಿ ನರೇಂದ್ರ ಮೋದಿಗಿಂತ ವಯಸ್ಸಿನಲ್ಲಿ ಮತ್ತು ಪಕ್ಷದಲ್ಲಿ ತುಂಬ ಹಿರಿಯರಾಗಿರುವ ಅಡ್ವಾಣಿ ಪಕ್ಷಾತೀತವಾದ, ಸ್ವತಂತ್ರ ಮತ್ತು ಸಂವಿಧಾನಾತ್ಮಕವಾದ ಸ್ಪೀಕರ್ ಸ್ಥಾನವನ್ನು ನಿರ್ವಹಿಸಲು ಆಸಕ್ತಿಯನ್ನು ತೋರಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯಂತಹ ಹಿರಿಯ ನಾಯಕರು, ತಮಗಿಂತ ಅತ್ಯಂತ ಕಿರಿಯನಾಗಿರುವ ಮೋದಿ ಕೈಕೆಳಗೆ ಕಾರ್ಯನಿರ್ವಹಿಸಿ ಮುಜುಗರ ಪಡುವುದನ್ನು ತಪ್ಪಿಸಲು ಗೌರವಯುತವಾದ, ಸ್ವತಂತ್ರವಾದ ಸ್ಥಾನಮಾನಗಳನ್ನು ನೀಡುವುದಕ್ಕೆ ಬಿಜೆಪಿ ನಾಯಕರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತದೆ.