ವಿಚಿತ್ರ ಆದ್ರೂ ಸತ್ಯ: 50 ವರ್ಷದೊಳಗಿನ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಪಾಠ ಮಾಡುವಂತಿಲ್ಲ

ಶುಕ್ರವಾರ, 15 ಜುಲೈ 2016 (16:43 IST)
ವಿದ್ಯಾರ್ಥಿನಿಯರಿಗೆ ಸುರಕ್ಷಿತವಾದಂತಹ ವಾತಾವರಣ ಕಲ್ಪಿಸಲು ಹರಿಯಾಣಾ ಸರಕಾರ ಹೊಸತೊಂದು ವಿಚಿತ್ರವಾದ ಕಾನೂನು ಜಾರಿಗೆ ತಂದಿದ್ದು, 50 ವರ್ಷದೊಳಗಿನ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಪಾಠ ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದೆ
 
ವಿವಾದಾತ್ಮಕ ಹೇಳಿಕೆಗಳಿಂದ ಖ್ಯಾತಿ ಪಡೆದ ರಾಜ್ಯದ ಶಿಕ್ಷಣ ಖಾತೆ ಸಚಿವ ರಾಮ್ ಬಿಲಾಸ್ ಶರ್ಮಾ, 50 ವರ್ಷದೊಳಗಿನ ಶಿಕ್ಷಕರು ವಿದ್ಯಾರ್ಥಿನಿಯರಿಗೆ ಪಾಠ ಮಾಡುವಂತಿಲ್ಲ. ವಿದ್ಯಾರ್ಥಿನಿಯರ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದ್ದಾರೆ. 
 
ಹರಿಯಾಣಾ ಸರಕಾರದ ನೂತನ ಶಿಕ್ಷಕರ ವರ್ಗಾವಣೆ ನೀತಿಯಂತೆ 50 ವರ್ಷದೊಳಗಿನ ಶಿಕ್ಷಕರನ್ನು ಸೀನಿಯರ್ ಸೆಕೆಂಡರಿ ವಿದ್ಯಾರ್ಥಿನಿಯರ ಶಾಲೆಗಳಿಗೆ ವರ್ಗಾಯಿಸುವುದಿಲ್ಲ. ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳದಂತಹ ಘಟನೆ ನಡೆಯಬಾರದು ಎನ್ನುವುದೇ ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ
 
ಆರಂಭದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಒಂದೇ ಶಾಲೆಯಲ್ಲಿ ಓದುವಂತಹ ಅವಕಾಶ ನೀಡಲಾಗಿತ್ತು. ತದ ನಂತರ ಸ್ವಾಮಿ ದಯಾನಂದ ಸರಸ್ವತಿ ಶಿಫಾರಸ್ಸಿನ ಅನ್ವಯ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶಾಲೆಗಳಿಗೆ ಆದ್ಯತೆ ನೀಡಲಾಯಿತು ಎಂದು ಮಾಹಿತಿ ನೀಡಿದ್ದಾರೆ.
 
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಟ್ಟಾ ಬೆಂಬಲಿಗರಾದ ಸಚಿವ ರಾಮ್ ಬಿಲಾಸ್ ಶರ್ಮಾ, ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರಿಗೆ ಯಾವುದೇ ತೊಂದರೆ ಎದುರಾಗಬಾರದು ಎನ್ನುವುದು ನಮ್ಮ ಸರಕಾರದ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ