ಭೋಪಾಲ್: ಸಿಎಂ ಶಿವರಾಜ್ ಸಿಂಗ್ ವಿರುದ್ಧ ಚುನಾವಣೆ ಆಯುಕ್ತರಿಗೆ ಕಾಂಗ್ರೆಸ್ ದೂರು

ಶನಿವಾರ, 27 ಜೂನ್ 2015 (16:12 IST)
ಗಾರೋಥ್ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ.
 
ಲಲಿತ್ ಮೋದಿ ಪ್ರಕರಣದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ವಿವಾದದ ಸುಳಿಗೆ ಸಿಲುಕಿರುವ ಮಧ್ಯೆ, ಇದೀಗ ಮಧ್ಯಪ್ರದೇಶದ ಮುಖ್ಯಮಂತ್ರಿ ಚೌಹಾನ್ ಕೂಡಾ ಮತ್ತೆ ವಿವಾದಕ್ಕೆ ಕಾರಣವಾಗಿರುವುದು ಬಿಜೆಪಿ ಹೈಕಮಾಂಡ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
 
ಕಾಂಗ್ರೆಸ್ ಪಕ್ಷದ ಪ್ರದಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಮತ್ತು ಮೋಹನ್ ಪ್ರಕಾಶ್ ಇಂದು ಚುನಾವಣೆ ಆಯುಕ್ತ ನಸೀಮ್ ಜೈದಿಯವರನ್ನು ಭೇಟಿ ಮಾಡಿ, ಸಿಎಂ ಚೌಹಾನ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ದೂರು ನೀಡಿದ್ದಾರೆ.   
 
ಒಂದು ಪ್ರತ್ಯೇಕ ಸಮುದಾಯದ ಮತಗಳನ್ನು ಬಿಜೆಪಿ ಪರ ಹಾಕಿಸಿದಲ್ಲಿ ಸೂಕ್ತ ಬಹುಮಾನ ನೀಡಲಾಗುವುದು ಎನ್ನುವ ಸಿಎಂ ಹೇಳಿಕೆಯ ಧ್ವನಿ ಸುರುಳಿಯ ಸಿಡಿಯನ್ನು ಚುನಾವಣೆ ಆಯುಕ್ತರಿಗೆ ಕಾಂಗ್ರೆಸ್ ಮುಖಂಡರು ಸಾಕ್ಷ್ಯವಾಗಿ ನೀಡಿದ್ದಾರೆ.
 
ಎಐಸಿಸಿ ಪ್ರದಾನ ಕಾರ್ಯದರ್ಶಿ ಸಿ.ಪಿ.ಜೋಷಿ ಮಾತನಾಡಿ ರಾಜಸ್ಥಾನದಲ್ಲಿ ಮುಖ್ಯಮಂತ್ರಿ ವಸುಂಧರಾ ರಾಜೇ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ