ಸರ್ದಾರ್ ಪಟೇಲ್‌ರಂತೆ ನಾನಾಗಬೇಕು: ಹಾರ್ದಿಕ್ ಪಟೇಲ್

ಮಂಗಳವಾರ, 1 ಸೆಪ್ಟಂಬರ್ 2015 (20:14 IST)
ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ದಾರ್ ವಲ್ಲಭಭಾಯಿ ಪಟೇಲ್‌ರಂತೆ ನಾನಾಗಬೇಕು ಎಂದು ಪಟೇಲ್ ಸಮುದಾಯದ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಹಾರ್ದಿಕ್ ಪಟೇಲ್ ಹೇಳಿದ್ದಾರೆ. 
 
ರಾಷ್ಟ್ರಪಿತ ಮಹಾತ್ಮಾ ಗಾಂಧಿ ಆಯೋಜಿಸಿದ್ದ ದಂಡಿ ಮಾರ್ಚ್‌ನ್ನು ಮತ್ತೆ ಆಯೋಜಿಸಲು ನಿರ್ಧರಿಸಿದ್ದಾಗಿ ಪಟೇಲ್ ತಿಳಿಸಿದ್ದಾರೆ.
 
ಮಾಧ್ಯಮಗಳ ಪ್ರಕಾರ, ಸೆಪ್ಟೆಂಬರ್ 5 ರಿಂದ ಸಬರಮತಿ ಆಶ್ರಮದವರೆಗೆ ದಂಡಿ ಮಾರ್ಚ್ ಆಯೋಜಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
 
22 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್, ನಿರಂತರವಾಗಿ ಮಾಧ್ಯಮಗಳ ಹೆಡ್‌ಲೈನ್‌ಗಳಲ್ಲಿ ಕಂಗೊಳಿಸುತ್ತಿದ್ದು, ಗುಜರಾತ್ ಮಾಡೆಲ್‌ನಿಂದ ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಾರೆ, ಬಡವರು ಮತ್ತಷ್ಟು ಬಡವರಾಗುತ್ತಾರೆ ಎಂದು ಮೋದಿಯವರ ಗುಜರಾತ್ ಮಾಡೆಲ್‌ನ್ನು ಲೇವಡಿ ಮಾಡಿದ್ದಾರೆ.
 
ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆಯವರ ಅದ್ಭುತ ಶಕ್ತಿ ಮತ್ತು ಅರವಿಂದ್ ಕೇಜ್ರಿವಾಲ್‌ರ ದೂರದೃಷ್ಟಿಯನ್ನು ಮೆಚ್ಚುವುದಾಗಿ ತಿಳಿಸಿದ ಅವರು, ಅಮೆರಿಕದಲ್ಲಿರುವಂತೆ ಶಸ್ತ್ರಾಸ್ತ್ರ ಕಾನೂನು ಜಾರಿಗೆ ತಂದಲ್ಲಿ ಅಪರಾಧ ಕೃತ್ಯಗಳು ಕಡಿಮೆಯಾಗಲಿವೆ ಎಂದು ಅಭಿಪ್ರಾಯಪಟ್ಟರು. 
 
ಪಟೇಲ್ ಸಮುದಾಯಕ್ಕೆ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಮೀಸಲಾತಿ ನೀಡಬೇಕು ಎನ್ನುವ ಹೋರಾಟವನ್ನು ಕುರ್ಮಿ ಮತ್ತು ಗುಜ್ಜರ್ ಸಮುದಾಯಕ್ಕೂ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.
 
ದೇಶದ 12 ರಾಜ್ಯಗಳಲ್ಲಿರುವ ಪಟೇಲ್ ಮತ್ತು ಕುರ್ಮಿ ಹಾಗೂ ಗುಜ್ಜರ್ ಸಮುದಾಯದ ಜನತೆಯನ್ನು ಒಗ್ಗೂಡಿಸಿ ಮೀಸಲಾತಿಗಾಗಿ ಹೋರಾಟ ನಡೆಸಲಾಗುವುದು ಎಂದು ಹಾರ್ದಿಕ್ ಪಟೇಲ್ ಮುಂದಿನ ಯೋಜನೆಯನ್ನು ವಿವರಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ