ಮೋದಿಯೊಂದಿಗೆ ಮಾತುಕತೆ ನಂತರವೇ ಮೈತ್ರಿ ತೀರ್ಮಾನ: ಠಾಕ್ರೆ

ಬುಧವಾರ, 1 ಅಕ್ಟೋಬರ್ 2014 (15:42 IST)
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಎನ್‌ಡಿಎ ಮೈತ್ರಿಕೂಟದಲ್ಲೇ ಉಳಿಯುವ ಅಥವಾ ಅದರಿಂದ ಹೊರಬರುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶಿವಸೇನಾ ಮುಖ್ಯಸ್ಥ ಉದ್ಧವ್‌ ಠಾಕ್ರೆ ಹೇಳಿದ್ದಾರೆ.
 
ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆಗಿನ ಸಂಬಂಧ ಕಡಿದುಕೊಂಡಿದ್ದರೂ ಕೇಂದ್ರದ ಆಡಳಿತಾರೂಢ ಸಮ್ಮಿಶ್ರ ಸರ್ಕಾರದಲ್ಲಿ ಮೈತ್ರಿ ಮುಂದುವರಿಯಬಹುದು ಎಂಬ ಸುಳಿವನ್ನು ಅವರು ನೀಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಮೈತ್ರಿಕೂಟದಿಂದ ಹೊರಬರುವುದು ಅಷ್ಟು ಸುಲಭವಲ್ಲ ಎಂದೂ ಅವರು ಅಭಿಪ್ರಾಯ­ಪಟ್ಟಿದ್ದಾರೆ.
 
ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ಶಿವಸೇನೆ ಸಂಸದ ಅನಂತ ಗೀತೆ ಅವರು ಮೋದಿ ಅವರು ಅಮೆರಿಕದಿಂದ ವಾಪಸ್ಸಾದ ನಂತರ ರಾಜೀನಾಮೆ ನೀಡುವರು ಎಂದು ಉದ್ಧವ್‌ ಸೋಮವಾರ ಹೇಳಿದ್ದರು. ಆದರೆ ಈ ಸಂಬಂಧ ತಮಗೆ ಯಾವ ಸೂಚನೆಯೂ ಬಂದಿಲ್ಲ ಎಂದು ಅನಂತ್‌ ಗೀತೆ ಮಂಗಳವಾರ ಹೇಳಿದ್ದಾರೆ. ಸದ್ಯಕ್ಕೆ ನನ್ನ ರಾಜೀನಾಮೆ ಪ್ರಶ್ನೆಯೇ ಉದ್ಭವಿಸುವುದಿಲ್ಲ.  ಒಂದೊಮ್ಮೆ ಪಕ್ಷದಿಂದ ನಿರ್ದೇಶನ ಬಂದರೆ ಖಂಡಿತ­ವಾಗಿಯೂ ಅದನ್ನು ಪಾಲಿಸುತ್ತೇನೆ’ ಎಂದರು.
 

ವೆಬ್ದುನಿಯಾವನ್ನು ಓದಿ