ಸಂಸತ್ತು ದಾಳಿಯಲ್ಲಿ ಅಫ್ಜಲ್ ಗುರುವಿನ ಪಾತ್ರದ ಬಗ್ಗೆ ಸಂದೇಹವಿದೆ: ಚಿದಂಬರಂ

ಗುರುವಾರ, 25 ಫೆಬ್ರವರಿ 2016 (18:39 IST)
ದೇಶದ ಪ್ರತಿಷ್ಠೆಯ ಸಂಕೇತವಾದ ಸಂಸತ್ತಿನ ಮೇಲೆ ನಡೆದ ದಾಳಿಯಲ್ಲಿ ಅಫ್ಜಲ್ ಗುರು ಪಾತ್ರವಿರುವ ಬಗ್ಗೆಯೇ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಪಿ.ಚಿದಂಬರಮ್
ಶಂಕೆ ವ್ಯಕ್ತ ಪಡಿಸಿದ್ದಾರೆ. ಈ ಮೂಲಕ ಅನವಶ್ಯಕವಾಗಿ ದೊಡ್ಡದೊಂದು ವಿವಾದಕ್ಕೆ ಕಿಡಿ ಹೊತ್ತಿಸಿದ್ದಾರೆ . ಅಫ್ಜಲ್ ಗುರು ಪ್ರಕರಣವನ್ನು ಸರಿಯಾಗಿ ಪರಿಶೀಲಿಸಲಾಗಿಲ್ಲ ಎಂದು ಸುಪ್ರೀಂಕೋರ್ಟ್ ಕಡೆಗೆಯೇ ಅವರು ಬೆರಳು ಮಾಡಿದ್ದಾರೆ. 
 
ಅಫ್ಜಲ್ ಪರ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿದ್ದು ಅತಿರೇಕ ಎಂದಿರುವ ಅವರು ಗಲ್ಲಿಗೇರಿಸಲ್ಪಟ್ಟ ಅಪರಾಧಿ ಅಫ್ಜಲ್ ಗುರು 2001ರಲ್ಲಿ ನಡೆದ ಸಂಸತ್ ಮೇಲಿನ ದಾಳಿಯಲ್ಲಿ ಶಾಮೀಲಾಗಿರುವುದೇ ಸಂಶಯವಾಗಿದೆ ಎನ್ನುವ ಮೂಲಕ ಬೇಜಬ್ದಾರಿತನವನ್ನು ಪ್ರದರ್ಶಿಸಿದ್ದಾರೆ.
 
ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಜತೆ ಮಾತನಾಡುತ್ತಿದ್ದ ಚಿದಂಬರಮ್ ಅಫ್ಜಲ್ ಗುರುವಿನ ಕೇಸನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ ಎಂದು ಹೇಳಿದ್ದಾರೆ.
 
ಆರು ಮಂದಿ ಪೊಲೀಸ್ ಅಧಿಕಾರಿಗಳು, ಇಬ್ಬರು ಸಂಸತ್ತು ಭದ್ರತಾ ಸಿಬ್ಬಂದಿ ಸಾವಿಗೆ ಕಾರಣವಾಗಿದ್ದ 2001ರಲ್ಲಿ ನಡೆದ ಸಂಸತ್ತು ದಾಳಿಗೆ ಸಂಬಂಧಪಟ್ಟಂತೆ ಅಫ್ಜಲ್ ಗುರುವಿಗೆ ಸುಪ್ರೀಂಕೋರ್ಟ್ ಮರಣದಂಡನೆ ಶಿಕ್ಷೆ ನೀಡಿತ್ತು. ಅಫ್ಜಲ್ ಗುರುವನ್ನು ಫೆಬ್ರವರಿ 9, 2013ರಲ್ಲಿ ನೇಣುಗಂಬಕ್ಕೆ ಏರಿಸಲಾಗಿತ್ತು. ಆಗ ಚಿದಂಬರಮ್ ಹಣಕಾಸು ಸಚಿವರಾಗಿದ್ದರು.

ವೆಬ್ದುನಿಯಾವನ್ನು ಓದಿ